ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಗೆ ಸಂಬಂಧಿಸಿದಂತೆ ನಾಳೆಯಿಂದ ಮತ್ತೆ ಹೋರಾಟ ಆರಂಭವಾಗಲಿದೆ ಎಂದು ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಶ್ರೀ ಹೇಳಿದ್ದಾರೆ.
‘ನಾಳೆಯಿಂದ ಮತ್ತೆ ಮೀಸಲಾತಿ ಹೋರಾಟ’
ನಗರದ ಬಸವೇಶ್ವರ ಪ್ರತಿಮೆಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಸಂಬಂಧ ಈಗಾಗಲೇ ಹೋರಾಟ ನಡೆದಿದೆ. ಪಾದಯಾತ್ರೆಯನ್ನೂ ಮಾಡಿದ್ದೇವೆ. ಅಧಿವೇಶನದಲ್ಲಿ ಅಂದಿನ ಸಿಎಂ ಆರು ತಿಂಗಳೊಳಗೆ ಬೇಡಿಕೆ ಈಡೇರಿಸುವ ಮಾತು ಕೊಟ್ಟಿದ್ದರು. ಅವರು ಮಾತು ಕೊಟ್ಟು ಸೆಪ್ಟೆಂಬರ್ 15 ಕ್ಕೆ ಆರು ತಿಂಗಳಾಗಲಿದ್ದು, ಕೊಟ್ಟ ಗಡುವು ಮುಗಿಯುತ್ತದೆ. ಹೀಗಾಗಿ ನಾವು ನಾಳೆಯಿಂದ ಮತ್ತೆ ಹೋರಾಟ ಆರಂಭಿಸುತ್ತೇವೆ. ಪ್ರತಿಜ್ಞಾ ಪಂಚಾಯತ್ ಹೆಸರಲ್ಲಿ ಮಲೆ ಮಹದೇಶ್ವರ ಬೆಟ್ಟದಿಂದ ಅಭಿಯಾನ ಶುರು ಮಾಡುತ್ತೇವೆ ಎಂದರು.
‘ನಮ್ಮ ಹೋರಾಟವನ್ನು ಬಿಎಸ್ವೈ ಅರ್ಥ ಮಾಡಿಕೊಳ್ಳಲಿಲ್ಲ’
ಸೆಪ್ಟಂಬರ್ 30 ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಫ್ರೀಡಂಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ. ಓಬಿಸಿ ಆಯೋಗಕ್ಕೆ ವರದಿ ಸಲ್ಲಿಸಲು ಸರ್ಕಾರ ಸೂಚಿಸಿದೆ. ವರದಿ ಬಂದ ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಈ ಹಿಂದೆ ಕೆಲವರು ಬಿಎಸ್ವೈಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆ, ಅವರು ನಮ್ಮ ಹೋರಾಟವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಆದರೆ, ಈಗಿನ ಸಿಎಂ ನಮ್ಮ ಭರವಸೆ ಈಡೇರಿಸುವ ವಿಶ್ವಾಸವಿದೆ. ಮೊನ್ನೆ ಸಿಎಂ ನಮ್ಮನ್ನು ಭೇಟಿ ಮಾಡಿ, ನನ್ನ ಮಾತಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದರು.
‘ನಮ್ಮ ಸಮುದಾಯಕ್ಕೆ ಖಂಡಿತ ನ್ಯಾಯ ಸಿಗಲಿದೆ’
ಸಮುದಾಯದ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಶಾಸಕ ವಿನಯ್ ಕುಲಕರ್ಣಿ, ಪಂಚಮಸಾಲಿ ಹೋರಾಟಕ್ಕೆ ನನ್ನ ಬೆಂಬಲವಿದೆ. ಶ್ರೀಗಳು ಹೋರಾಟ ಪ್ರಾರಂಭ ಮಾಡಿದ್ದು, ಅವರ ಜೊತೆ ಸದಾ ನಾವು ಇರುತ್ತೇವೆ. ನಮ್ಮ ಸಮುದಾಯಕ್ಕೆ ಖಂಡಿತ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕೋರ್ಟ್ ಹೇಳಿದ ಇತಿಮಿತಿಯಲ್ಲೇ ನಾನು ಇರುತ್ತೇನೆ’
ಕೋರ್ಟ್ ಹೇಳಿದ ಇತಿಮಿತಿಯಲ್ಲೇ ನಾನು ನಡೆದುಕೊಳ್ಳುತ್ತೇನೆ. ಕೋರ್ಟ್ ಹೇಳಿದ ವಿಚಾರಗಳು ನನ್ನ ಅರಿವಿನಲ್ಲಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಾನು ನಿರಪರಾಧಿಯಾಗಿ ಹೊರ ಬರುತ್ತೇನೆ ಅನ್ನೋ ನಂಬಿಕೆಯಿದೆ. ಷಡ್ಯಂತ್ರ ಅಥವಾ ಪ್ರಕರಣದ ವಿಚಾರದಲ್ಲಿ ನಾನು ಏನೇನೂ ಮಾತನಾಡಲ್ಲ ಆ ವಿಚಾರ ಕೇಳಬೇಡಿ, ನಾನು ಏನೂ ಹೇಳುವುದಿಲ್ಲ ಎಂದು ಕುಲಕರ್ಣಿ ಸ್ಪಷ್ಟಪಡಿಸಿದರು.
ಯತ್ನಾಳ್ಗೆ ಕಾಶಪ್ಪನವರ್ ಎಚ್ಚರಿಕೆ
ಶಾಸಕ ಬಸನಗೌಡ ಪಾಟೀಲ್(ಯತ್ನಾಳ್) ಅವರ ರಾಹುಲ್ ಗಾಂಧಿ ವಿರುದ್ಧ ನೀಡಿರುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಕಾಂಗ್ರೆಸ್ ವಿಚಾರ ಬಂದ್ರೆ ನಾನು ಹುಟ್ಟು ಕಾಂಗ್ರೆಸ್ಸಿಗ. ಯತ್ನಾಳ್ ಮಾತನಾಡಿದ್ದು ತಪ್ಪು. ನಾನು ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ನಾವು ವಾಜಪೇಯಿ ಬಗ್ಗೆ ಮಾತನಾಡಿದ್ರೆ ಅವರು ಸುಮ್ಮನಿರ್ತಾರಾ. ಸಮುದಾಯದ ಹೋರಾಟ ಬೇರೆ, ರಾಜಕೀಯ ವಿಚಾರವೇ ಬೇರೆ ಎಂದರು.
ಇದನ್ನೂ ಓದಿ: ಸಿಎಂ ದೆಹಲಿ ಪ್ರವಾಸಕ್ಕೆ ಸಿದ್ಧತೆ: ಬೊಮ್ಮಾಯಿ ನಿವಾಸಕ್ಕೆ ಸಚಿವಾಕಾಂಕ್ಷಿಗಳ ದೌಡು