ಬೆಂಗಳೂರು: ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರನ್ನು ಜೆ.ಜೆ.ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊರೊನಾ ಪಾಸಿಟಿವ್ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಇಮ್ರಾನ್ ಪಾಷಾ, ಇಂದು ಬಿಡುಗಡೆಯಾಗುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಅಂತರವಿಲ್ಲದೇ ಪಟಾಕಿ ಸಿಡಿಸಿ ಹೂಮಾಲೆ ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ. ಈ ವರ್ತನೆ ಕಾನೂನಿಗೆ ವಿರುದ್ಧವಾಗಿದ್ದು, ಈ ಹಿನ್ನೆಲೆ ಇಮ್ರಾನ್ ಪಾಷಾ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇನ್ನು ಸಂಭ್ರಮಾಚರಣೆಯ ವೇಳೆ ಜನರನ್ನು ಚದುರಿಸಲು ಪೊಲೀಸರು ಫೀಲ್ಡಿಗಿಳಿದಿದ್ದರು. ಹೊಯ್ಸಳ, ಗರುಡ ಪಡೆ, ರ‍್ಯಾಲಿ ಫೋರ್ಸ್ ಸಿಬ್ಬಂದಿ ಸ್ಥಳದಲ್ಲಿ ಪರಿಸ್ಥಿತಿ ನಿಭಾಯಿಸಿದರು. ಇನ್ನೊಂದೆಡೆ, ರೋಡ್ ಶೋ ಹಿನ್ನೆಲೆ ಬಿನ್ನಿಮಿಲ್ ರಸ್ತೆ ಸಂಪೂರ್ಣವಾಗಿ ಸಂಚಾರ ದಟ್ಟಣೆ ಉಂಟಾಗಿತ್ತು.
ಎಂಟು ದಿನದ ಚಿಕಿತ್ಸೆಯ ಬಳಿಕ ಕಡ್ಡಾಯವಾಗಿ ಹೋಂ ಕ್ವಾರಂಟೈನ್ನಲ್ಲಿರುವಂತೆ ಇಮ್ರಾನ್ ಪಾಷಾ ಅವರ ಕೈಗೆ ಸೀಲ್ ಹಾಕಿ ಕಳುಹಿಸಲಾಗಿದೆ. ಆದರೆ ಮಾಸ್ಕ್ ಕೂಡಾ ಹಾಕದೆ ಜನರ ಸಂಭ್ರಮದಲ್ಲಿ ಅವರು ಭಾಗಿಯಾಗಿ, ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ. ಈಗಾಗಲೇ ಒಂದು ಕೇಸ್ ಇಮ್ರಾನ್ ಪಾಷಾ ಮೇಲೆ ದಾಖಲಾಗಿದ್ದು, ಈಗ ಮತ್ತೊಮ್ಮೆ ಜವಾಬ್ದಾರಿ ಮರೆತು ರೋಡ್ ಶೋ ನಡೆಸಿದ್ದಾರೆ.