ಬೆಂಗಳೂರು : ಅನರ್ಹ ಶಾಸಕರ ಕ್ಷೇತ್ರದಲ್ಲಿ ಉಪಚುನಾವಣೆಗೆ ಆಯೋಗ ಸಿದ್ಧವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ.
ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಕಟ್ಟಿ ಹಾಕಲು ಕಾಂಗ್ರೆಸ್‌ನಿಂದ ರಣತಂತ್ರ ಸಿದ್ಧವಾಗಿದೆ. ಶಾಸಕ ಬೈರತಿ ಸುರೇಶ್ ಅವರ ಪತ್ನಿ ಪದ್ಮಾವತಿಯವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ಧವಾಗಿದೆ. ಈ ಕುರಿತಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮೇಲೆ ಒತ್ತಡ ತಂದಿರುವ ಹೊಸಕೋಟೆ ಜಿಲ್ಲಾ ಕಾಂಗ್ರೆಸ್ ನಾಯಕರು, ಈ ಬಗ್ಗೆ ಚರ್ಚೆ ಕೂಡ ಮಾಡಿದ್ದಾರೆ. ಅಲ್ಲದೆ ಹೊಸಕೋಟೆ ಭಾಗದ ಕಾಂಗ್ರೆಸ್ ನಾಯಕರ ಜತೆ ಸಭೆ ಕೂಡ ನಡೆಸಿದ್ದು, ಪತ್ನಿ ಸ್ಪರ್ಧೆಗೆ ಬೈರತಿ ಸುರೇಶ್ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಎಂಟಿಬಿ ನಾಗರಾಜ್ ಕಟ್ಟಿಹಾಕಲು ಅದೇ ಸಮುದಾಯದ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕು ಎಂಬ ಉದ್ದೇಶದಿಂದ ಪದ್ಮಾವತಿ ಆಯ್ಕೆ ಮಾಡಲಾಗಿದೆ. ಅಲ್ಲದೇ ಹೊಸಕೋಟೆ ಕ್ಷೇತ್ರ ಬೈರತಿ ಸುರೇಶ್ ಕುಟುಂಬಕ್ಕೆ ಚಿರಪರಿಚಿತ. ಬೈರತಿ ಸುರೇಶ್ ಚಿಕ್ಕಪ್ಪ ಹಾಗೂ ಅಜ್ಜಿ ಇದೇ ಕ್ಷೇತ್ರದಲ್ಲಿ ಈ ಹಿಂದೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇದೇ ಲಾಭವನ್ನ ಪಡೆಯಲು ಕಾಂಗ್ರೆಸ್ ಮುಂದಾಗಿದೆ.
ಇತ್ತ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜ್ ಪುತ್ರ ನಿತೀಶ್ ಪುರುಷೋತ್ತಮ್ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ. ಪದ್ಮಾವತಿಯವರ ಸ್ಪರ್ಧೆಗೆ ಡಿ ಕೆ ಶಿವಕುಮಾರ್ ಕೂಡ ಒಪ್ಪಿಗೆ ಸೂಚಿಸಿರುವ ಹಿನ್ನೆಲೆ ಪ್ರಚಾರಕ್ಕೆ ಸಮಸ್ಯೆ ಎದುರಾಗದು. ನನ್ನ ನಿನ್ನ ಭೇಟಿ ಹೊಸಕೋಟೆ ರಣರಂಗಣದಲ್ಲಿ ಎಂದಿದ್ದ ಡಿ ಕೆ ಶಿವಕುಮಾರ್ ಈ ರೀತಿ ಕಣಕ್ಕಿಳಿಯುವ ಪದ್ಮಾವತಿಯವರಿಗೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಈ ಮೂಲಕ ಹೊಸಕೋಟೆ ಪ್ರತಿಷ್ಠೆಯ ರಣರಂಗವಾಗಲಿದೆ.