ಬೆಂಗಳೂರು: ಪಾದರಾಯನಪುರ ವಾರ್ಡ್ 135 ರ ಪಾಲಿಕೆ ಸದಸ್ಯನಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಜನಪ್ರತಿನಿಧಿಗೆ ಸೋಂಕು ತಗುಲಿದ ಮೊದಲ ಪ್ರಕರಣ ಇದಾಗಿದೆ.
ಯಾವುದೇ ಸೋಂಕಿನ ಲಕ್ಷಣ ಇಲ್ಲದೆಯೇ ಕೊರೊನಾ ಪಾಸಿಟಿವ್ ವರದಿಯಾಗಿದೆ. ಇಂದು ವಿಕ್ರಂ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ನಡೆಸಿದ್ದು, ರಾತ್ರಿ ವೇಳೆಗೆ ವರದಿ ಪಾಸಿಟಿವ್ ಬಂದಿದೆ. ಇವರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗಡೆ ಮಾಹಿತಿ ನೀಡಿದರು.
ತಬ್ಲಿಘಿ ನಂಟಿನಿಂದ ಇಡೀ ಪಾರಾಯನಪುರಕ್ಕೆ ಕೊರೊನಾ ಅಂಟಿತ್ತು. ಒಂದೇ ವಾರ್ಡ್ನಲ್ಲಿ 64 ಪಾಸಿಟಿವ್ ಕೊರೊನಾ ಪ್ರಕರಣಗಳು ವರಸಿಯಾಗಿದ್ದವು. ಈ ವೇಳೆ, ವಾರ್ಡ್ ಪೂರ್ತಿ ಓಡಾಡಿದ್ದ ಕಾರ್ಪೋರೇಟರ್ಗೂ ಸೋಂಕು ತಗುಲಿದೆ.
ಇವರ ಮಕ್ಕಳು, ಪತ್ನಿ, ಇಬ್ಬರು ಕಾರು ಚಾಲಕರು, ಮನೆ ಕೆಲಸದವರು ಸೇರಿ 15 ಕ್ಕೂ ಹೆಚ್ಚು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.