ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಇದುವರೆಗೆ 149 ಜನರ ಬಂಧಿಸಲಾಗಿದ್ದು, ಘಟನೆ ಕುರಿತಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಿನ್ನೆ ಹಿರಿಯ ಅಧಿಕಾರಿಗಳಾದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್, ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್, ವೈಟ್ ಫೀಲ್ಡ್ ವಿಭಾಗ ಅನುಚೇತ್ ಹಾಗೂ ಸಿಸಿಬಿ ತಂಡ ಘಟನೆಗೆ ಪ್ರಮುಖ ಕಾರಣಗಳೇನು ಎಂಬುದರ ಕುರಿತು ಕೆಲ ರೋಚಕ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಘಟನೆಗೆ ಪ್ರಮುಖ ಕಾರಣ:
ಪಾದರಾಯನಪುರದಲ್ಲಿ ಒಟ್ಟು19 ಕೊರೊನಾ ಪಾಸಿಟಿವ್ ಕೇಸ್ಗಳಿದ್ದು, ಬಿಬಿಎಂಪಿ ಆ ಪ್ರದೇಶವನ್ನ ಸೀಲ್ಡೌನ್ ಮಾಡಿತ್ತು. ಯಾರೂ ಕೂಡ ಮನೆಯಿಂದ ಹೊರಬಾರದ ರೀತಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಆದರೆ, ಕಳೆದೆರಡು ದಿನಗಳ ಹಿಂದೆ ಬಂಧಿತ ಆರೋಪಿಗಳು ಆಕ್ರೋಶಗೊಂಡು ನಮಗೆ ಮೊಟ್ಟೆ, ಮಾಂಸ, ಮೀನು ಅಗತ್ಯ ಸೇವೆ ಒದಗಿಸುವಂತೆ ಆಕ್ರೋಶ ಹೊರ ಹಾಕಿದ್ದರು. ಈ ವೇಳೆ ಕಾರ್ಪೋರೇಟರ್ ಸ್ಥಳಕ್ಕೆ ಆಗಮಿಸಿ ಸಮಾಧಾನ ಪಡಿಸಿದ್ದರು.
ಇದನ್ನೇ ಬಂಡವಾಳವಾಗಿಟ್ಟುಕೊಂಡ ಆರೋಪಿಗಳು, ಸ್ಥಳೀಯ ಜನರನ್ನ ಕೆರಳಿಸಿ ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಒಂದು ಮೂಲದ ಪ್ರಕಾರ ವಜೀರ್ , ಇರ್ಫಾನ್ ,ಕಬೀರ್,ಇರ್ಷಾದ್ ಅಹಮದ್ ಕಬೀರ್ ,ಫರ್ಜಿನಾ ಎಂಬುವವರು ತಂಡಕಟ್ಟಿ ಅಧಿಕಾರಿಗಳು ಬಂದರೆ ಗಲಾಟೆ ಮಾಡುವ ಸ್ಕೆಚ್ ಹಾಕಿಕೊಂಡಿದ್ದರು. ಅದರಂಂತೆ ಕೊರೊನಾ ಸೋಂಕಿತರ ಜೊತೆ ಸಂಪರ್ಕ ಹೊಂದಿರುವವರನ್ನು ಅಧಿಕಾರಿಗಳು ಕ್ವಾರಂಟೈನ್ಗೆ ಕರೆದುಕೊಂಡು ಹೋಗಲು ಬಂದಾಗ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖ ಆರೋಪಿಗಳ ಹಿನ್ನೆಲೆ :
ವಜೀರ್ : ಈತ ಘಟನೆಯ ಪ್ರಮುಖ ಆರೋಪಿಯಾಗಿದ್ದು, ತನ್ನ ಮನೆಗೆ ಇತರೆ ಆರೋಪಿಗಳನ್ನ ಕರೆಸಿಕೊಂಡು ಮೀಟಿಂಗ್ ನಡೆಸಿ ವ್ಯವಸ್ಥಿತವಾಗಿ ಯೋಜನೆ ಮಾಡಿದ್ದನು.
ಇರ್ಫಾನ್ : ಈತ ಕೆಲ ಸಂಘಟನೆಗಳ ಕಾರ್ಯಕರ್ತನಾಗಿದ್ದು, ಗಲಾಟೆಗೆ ಬೇಕಾದ ವ್ಯವಸ್ಥೆ ಕಲ್ಪಿಸಿ ಸದ್ಯ ತಲೆಮರೆಸಿಕೊಂಡಿದ್ದಾನೆ.
ಕಬೀರ್ : ಈತ ಗುಜರಿ ಕೆಲಸ ಮಾಡಿಕೊಂಡಿದ್ದು, ಪಾದರಾಯನಪುರದಲ್ಲಿ ಚಪ್ಪರ್ ಎಂಬ ಹೆಸರಿನಲ್ಲಿ ಖ್ಯಾತಿಯಾಗಿದ್ದಾನೆ.
ಇರ್ಷಾದ್: ಕಬೀರ್ ಜೊತೆ ಗುಜುರಿ ಅಂಗಡಿ ಕೆಲಸ ಮಾಡುತ್ತಿದ್ದು, ಗಲಾಟೆಗೆ ಕುಮ್ಮಕ್ಕಿಗೆ ಸಾಥ್ ನೀಡಿದ್ದನು.
ಫರ್ಜಿವಾ : ಈಕೆ ಪಾದರಾಯನಪುರ ಲೇಡಿ ಡಾನ್ . ತರಕಾರಿ ಮಾರಾಟ ಮಾಡುತ್ತಾ, ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಳು.
ಸದ್ಯ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಘಟನೆ ಹಿಂದೆ ಕೆಲ ವ್ಯಕ್ತಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.