ಬೆಂಗಳೂರು: ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲ-ಸಲ್ಲದ ಆರೋಪಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ಹಾಗಾಗಿ ಈ ಪ್ರಕರಣದ ಸತ್ಯಾಂಶ ಹೊರಬರಬೇಕಾದರೆ ಸಮಗ್ರ ತನಿಖೆ ನಡೆಯಬೇಕಿದೆ ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿಗೆ ಸಂಬಂಧಿಸಿದಂತೆ ಅವರು ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ರು.
ಪಿಎ ರಮೇಶ್ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ಅಗತ್ಯವಿದೆ. ಕೆಲವೊಬ್ಬರು ನಾನೇ ಕೊಲೆ ಮಾಡಿಸಿದ್ದೇನೆ ಅಂತಾರೆ. ಅಲ್ಲದೆ ನಾನು ಅವನ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿದ್ದೀನಿ, ಅದರ ಬಗ್ಗೆ ಐಟಿ ಅಧಿಕಾರಿಗಳು ವಿಚಾರಿಸುತ್ತಾರೆಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಬಿಂಬಿಸಲಾಗುತ್ತಿದೆ. ನನ್ನ ವಿರುದ್ಧ ಇಂತಹ ಆರೋಪಗಳು ಬೇಡ. ಸತ್ಯಾಸತ್ಯತೆ ತಿಳಿದುಕೊಳ್ಳಲು ಸಮಗ್ರ ತನಿಖೆ ನಡೆಯಲಿ. ಅವನು ಯಾವ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡ ಅನ್ನೋದರ ಬಗ್ಗೆ ನಾನು ಕೂಡ ತಿಳಿದುಕೊಳ್ಳಬೇಕಿದೆ ಎಂದು ಪರಮೇಶ್ವರ್ ಎಂದು ಹೇಳಿದ್ರು.
ಇನ್ನು, ಐಟಿ ವಿಚಾರಣೆಗೆ ನಾನು ಇನ್ನೂ ಮೂರ್ನಾಲ್ಕು ದಿನಗಳ ಕಾಲ ಸಮಯಾವಕಾಶ ಕೇಳಿದ್ದೇನೆ. ಹಾಗೆಯೇ ಐಟಿ ಅಧಿಕಾರಿಗಳಿಗೂ ಸಮಯ ಬೇಕಾಗುತ್ತದೆ. ಐಟಿ ವಶಕ್ಕೆ ಪಡೆದಿದ್ದ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ ಎಂದು ಮಾಜಿ ಡಿಸಿಎಂ ತಿಳಿಸಿದರು.