ಬೆಂಗಳೂರು: ಕಾಂಗ್ರೆಸ್ ಪಕ್ಷ ಜನರ ನಿಜವಾದ ಸಮಸ್ಯೆಯ ನಿವಾರಣೆಗೆ ಶ್ರಮಿಸುತ್ತದೆ. ಬಿಜೆಪಿಯಂತೆ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸುವ ಕಾರ್ಯ ಮಾಡುವುದಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭೆ ಸದಸ್ಯ ಪಿ. ಚಿದಂಬರಂ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು "ಕಾಂಗ್ರೆಸ್ ಪ್ರಚಾರದಲ್ಲಿ ಭಾಗಿಯಾಗಿರುವುದಕ್ಕೆ ಸಂತೋಷವಾಗಿದೆ. ಕಾಂಗ್ರೆಸ್ ಜನರ ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿದೆ. ಆದರೆ, ಇಂದು ಜನರ ಸಮಸ್ಯೆಗಳ ಚರ್ಚೆಯ ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಹಾಲಿ ರಾಜ್ಯ ಸರ್ಕಾರ ಜನ ಮತದಿಂದ ಅಧಿಕಾರಕ್ಕೆ ಬಂದಿಲ್ಲ. ಬದಲಾಗಿ ಕುದುರೆ ವ್ಯಾಪಾರದಿಂದ ಸರ್ಕಾರ ರಚನೆ ಮಾಡಲಾಗಿದೆ" ಎಂದು ಆರೋಪಿಸಿದರು.
ಈ ಕಾರಣಕ್ಕಾಗಿ ಸರ್ಕಾರದಲ್ಲಿ 40 ಪರ್ಸೆಂಟ್ ಭ್ರಷ್ಟಾಚಾರ ಇದೆ. ರಾಜ್ಯ ಸರ್ಕಾರದ ವಿರುದ್ಧ ಇರುವ 40 ಪರ್ಸೆಂಟ್ ಕಮಿಷನ್ ಆರೋಪ ದೇಶದ ಗಮನ ಸೆಳೆಯುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ, ಆರ್ಥಿಕತೆಯ ಭರವಸೆ ಈಡೇರಿಸಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಖಾಸಗೀಕರಣಕ್ಕೆ ರಾಜ್ಯ ಸರ್ಕಾರ ಹೊರಟಿದೆ. ಶಾಲೆಗಳಲ್ಲಿ ಮಕ್ಕಳಿಗೆ ಶೌಚಾಲಯ ಇಲ್ಲ. ವಿದ್ಯಾರ್ಥಿ ವೇತನವೂ ಸಿಗುತ್ತಿಲ್ಲ. ರಾಜ್ಯದಲ್ಲಿ ಮತೀಯ ಆಧಾರದಲ್ಲಿ ಜನರನ್ನು ಸಂಘ ಪರಿವಾರ ವಿಭಜನೆ ಮಾಡುತ್ತಿದೆ. ಹಿಜಾಬ್ ಹಲಾಲ್, ಮತಾಂತರ ನಿಷೇಧ ಕಾಯ್ದೆ ಮೂಲಕ ಜನರ ನಡುವೆ ಗೊಂದಲ ಸೃಷ್ಟಿಯಾಗಿದೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ 85 ಪರ್ಸೆಂಟ್ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು "ಮೋದಿ ಭಾರತ ಅಭಿವೃದ್ಧಿ ಆಗಿದ್ದೆ 2014ರ ಬಳಿಕ ಅನ್ನೋ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈಗ ನಡೆಯುತ್ತಿರುವುದು ಕರ್ನಾಟಕದ ರಾಜ್ಯದ ಚುನಾವಣೆ. ಕರ್ನಾಟಕದಲ್ಲಿ 40 ಪರ್ಸೆಂಟ್ ಕಮಿಷನ್ ಸರ್ಕಾರ ಅಂತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದಿದ್ದಾರೆ. ಮೊದಲು ಕೆಂಪಣ್ಣ ಪತ್ರಕ್ಕೆ ಉತ್ತರ ಕೊಡಲಿ. ಅದು ಬಿಟ್ಟು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಮೋದಿ ಅವರ ಹೇಳಿಕೆಯನ್ನ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯ ಇಲ್ಲ" ಎಂದು ಹೇಳಿದರು.
ಕೇರಳದಲ್ಲಿ ಸಾವಿರಾರು ಯುವತಿಯರು ಹಿಂದೂ ಧರ್ಮದಿಂದ ಮುಸ್ಲಿಂ ಸಮುದಾಯಕ್ಕೆ ಕನ್ವರ್ಟ್ ಆಗಿದ್ದಾರೆ ಎನ್ನುವುದು ಸುಳ್ಳು. ಇದೊಂದು ತಪ್ಪು ಮಾಹಿತಿ. ಸಿನಿಮಾದಲ್ಲಿ ಇಂತದ್ದೊಂದು ವಿಚಾರ ತಿಳಿಸುವ ಯತ್ನ ಮಾಡಿದ್ದಾರೆ ಎಂದು ಕೇಳಿದ್ದೇನೆ. ನಾನು ನೋಡಿಲ್ಲ. ಅಲ್ಲಿನ ವಸ್ತುಸ್ಥಿತಿ ಬೇರೆ ಇದೆ. ಯಾವುದೇ ರೀತಿಯಲ್ಲೂ ಸಿನಿಮಾದ ಕತೆ ನೈಜವಾಗಿರಲ್ಲ. ಅಲ್ಲಿನ ಸ್ಥಿತಿ ಹಾಗಿಲ್ಲ ಎನ್ನುವುದು ನನ್ನ ಭಾವನೆ. ಈ ಸುಳ್ಳು ಕತೆ ಆಧಾರಿತ ಸಿನಿಮಾವನ್ನು ಕಾಂಗ್ರೆಸ್ ಪಕ್ಷ ವಿರೋಧಿಸಿದೆ. ನಾನು ಕಳೆದ ವಾರ ಕೇರಳಕ್ಕೆ ಹೋದಾಗ ಇಂತಹ ಸ್ಥಿತಿ ಇಲ್ಲ. ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಇದನ್ನು ಒಪ್ಪಿಲ್ಲ ಹಾಗೂ ಚಿತ್ರದ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನಿಸಿದ್ದಾರೆ ಎಂದರು.
ಬಿಜೆಪಿ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸಿ "ಅಲ್ಲಿನ ಕೊಡುಗೆಗಳ ಬಗ್ಗೆ ಯಾವುದೇ ಅಚ್ಚರಿ ವ್ಯಕ್ತಪಡಿಸುವುದಿಲ್ಲ. ಅವರು ನೀಡಿದ ಕೊಡುಗೆಗಳು ಈಡೇರುವಂತದ್ದಲ್ಲ. ಅದು ಜನರಿಗೆ ಗೊತ್ತು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಕೊಡುಗೆ ನೀಡಲಾಗಿದೆ. ಜನರಿಗೆ ಅಗತ್ಯವಿರುವ ಅಂಶವನ್ನು ನೀಡಲಾಗಿದೆ. ಇದನ್ನು ಜನ ಒಪ್ಪುತ್ತಾರೆ" ಎಂಬ ವಿಶ್ವಾಸವಿದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳೇನು? ಇಲ್ಲಿದೆ ಫುಲ್ ಡಿಟೇಲ್ಸ್