ಬೆಂಗಳೂರು: 2017ರಲ್ಲಿ ನಗರದ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಕೆ ಮಾಡಿದ್ದ ಬೈಕ್ ಅನ್ನು ಅದರ ಮಾಲೀಕ ಗುರುತಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಕೋಕಾ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೆ.ಬೀರನಹಳ್ಳಿಯ ಬಿ.ಎಂ. ಗಿರೀಶ್ ಕಪ್ಪು ಬಣ್ಣದ ಹೀರೋ ಪ್ಯಾಷನ್ ಪ್ರೋ ಬೈಕ್ ತನ್ನದೇ ಎಂದು ವಿವರಿಸಿದರು.
ಅಲ್ಲದೇ, ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಸಲುವಾಗಿ ದಾವಣಗೆರೆ ಆಸ್ಪತ್ರೆಗೆ ಬರುತ್ತಿದ್ದೆವು. ಈ ನಡುವೆ 2016ರ ಅಕ್ಟೋಬರ್ 21ರಂದು ದಾವಣಗೆರೆ ನಗರದ ಆಸ್ಪತ್ರೆಯೊಂದರ ಪಾರ್ಕಿಂಗ್ನಲ್ಲಿ (ಕೆಎ 17, ಇಸಿ-9075) ಮಧ್ಯಾಹ್ನ 1.30ರ ಸಮಯದಲ್ಲಿ ಬೈಕ್ ನಿಲ್ಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಎಲ್ಲ ಕೆಲಸ ಮುಗಿಸಿ ರಾತ್ರಿ 8.30ಕ್ಕೆ ಹಿಂದಿರುಗಿದಾಗ ಬೈಕ್ ಇರಲಿಲ್ಲ. ಸುತ್ತಮುತ್ತಲ ಭಾಗಗಳಲ್ಲಿ ಹುಡುಕಿ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾದರೂ ಸ್ವೀಕರಿಸಲಿಲ್ಲ. ಬಳಿಕ 2016ರ ಡಿಸೆಂಬರ್ 4ರಂದು ದಾವಣಗೆರೆ ಪೊಲೀಸರಿಗೆ ದೂರು ದಾಖಲಿಸಿದ್ದೆ ಎಂಬುದಾಗಿ ವಿವರಿಸಿದರು.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಾಲಯ ವಿಚಾರಣೆ ಮುಂದೂಡಿತು. ಇದೇ ಬೈಕ್ ಅನ್ನು ಪ್ರಕರಣದ ಆರೋಪಿಗಳಾದ ಗಣೇಶ್ ಮಿಸ್ಕಿನ್ ಮತ್ತು ಪರಶುರಾಮ ವಾಗ್ಮೋರೆ ಗೌರಿ ಲಂಕೇಶ್ ಕೊಲೆ ಬಳಕೆ ಮಾಡಿಕೊಂಡಿದ್ದರು.
ಇದನ್ನೂ ಓದಿ: ಗೌರಿ ಲಂಕೇಶ್ ಹತ್ಯೆ: ಕೊಲೆ ನೋಡಿದ ಮೊದಲ ಇಬ್ಬರು ಸಾಕ್ಷಿದಾರರು ಕೋರ್ಟ್ಗೆ ಹಾಜರು