ಬೆಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಹೊಸ ವರ್ಷಾಚರಣೆಗೆ ತೊಡಕಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಎಂ.ಜಿ. ರೋಡ್ ಹಾಗೂ ಬಿಗ್ರೇಡ್ ರಸ್ತೆಯಲ್ಲಿ ಹೊಸ ವರ್ಷ ಆಚರಣೆಗೆ ಕಡಿವಾಣ ಬೀಳುವ ಸಾಧ್ಯತೆಯಿದೆ. ಕೇರಳದಲ್ಲಿ ಕೊರೊನಾ ಸಾಂಕ್ರಾಮಿಕ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿರುವುದು ದೃಢವಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ತಜ್ಞರೊಂದಿಗೆ ಸಭೆ ನಡೆಸಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಎಂದು ಸೋಮವಾರ ಆದೇಶ ಹೊರಡಿಸಿತ್ತು.
ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ವ್ಯಾಪಿಸದಂತೆ ಮುಂಜಾಗ್ರತವಾಗಿ ಕ್ರಮ ಕೈಗೊಳ್ಳಬೇಕಿದೆ. ಹೀಗಾಗಿ ಎಂ.ಜಿ. ರೋಡ್ ಹಾಗೂ ಬಿಗ್ರೇಡ್ ರೋಡ್ನಲ್ಲಿ ಎಂದಿನಂತೆ ಹೊಸ ವರ್ಷಾಚರಣೆಗೆ ಅವಕಾಶ ನೀಡುವ ಬಗ್ಗೆ ನಗರ ಪೊಲೀಸರಲ್ಲಿ ಗೊಂದಲ ಮೂಡಿದೆ. ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ನಡೆಸಿದ ಬಳಿಕ ಹೊಸ ವರ್ಷಾಚರಣೆಯ ಪರಿಷ್ಕೃತ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಆಯುಕ್ತರು "ನ್ಯೂ ಇಯರ್ಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಲಾಗುತ್ತಿದೆ. ಆಚರಣೆ ನಡೆಸುವುದರಿಂದ ಯಾರಿಗೂ ಕೂಡ ಅಡಚಣೆ ಆಗದ ರೀತಿ ನೋಡಿಕೊಳ್ಳಲಾಗುತ್ತದೆ. ಕಳೆದ ಬಾರಿ ಹೇಗೆ ನಡೆಸಲಾಗಿತ್ತೋ ಈ ಬಾರಿಯೂ ಅದೇ ರೀತಿ ಇರಲಿದೆ. ಎಂ.ಜಿ. ರೋಡ್ನಲ್ಲಿ ಮಧ್ಯರಾತ್ರಿ ಆಚರಣೆಗೆ ಅನುಮತಿ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಕೋವಿಡ್ ಹೊಸ ಅಲೆಯ ಬಗ್ಗೆಯೂ ಅಧಿಕಾರಿಗಳ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಏರಿಕೆ ಕಾಣುತ್ತಿದೆ ಕೋವಿಡ್; ಮುಂಜಾಗ್ರತೆಗೆ WHO ಕರೆ