ಬೆಂಗಳೂರು: ಬಿಜೆಪಿಯಲ್ಲಿನ ಅಸಮಾಧಾನದ ಬೆನ್ನಲ್ಲೇ, ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಅಷ್ಟೇ. ಆದರೆ ನಮ್ಮ ನಾಯಕರು ಮೋದಿ, ಅಮಿತ್ ಶಾ ಹಾಗೂ ನಡ್ಡಾ ಎಂದು ಪರೋಕ್ಷವಾಗಿ ಬಿಎಸ್ವೈ ನಾಯಕರಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಉಮೇಶ್ ಕತ್ತಿ ಹಾಗೂ ಇನ್ನಿತರೆ ನಾಯಕರ ಸಭೆ ಬಗ್ಗೆ ಮಾತನಾಡಿದ ಅವರು, ಉಮೇಶ್ ಕತ್ತಿ ಅವರ ಮನೆಯಲ್ಲಿ ರೊಟ್ಟಿ ತಿನ್ನಲು ಹೋಗಿದ್ದೆವು, ಯಡಿಯೂರಪ್ಪ ವಿರುದ್ಧ ಅಸಮಾಧಾನದ ಚರ್ಚೆ ಆಗಿಲ್ಲ. ಲೋಕಾಭಿರಾಮವಾಗಿ ಮಾತನಾಡಿದ್ದೇವೆ. ನಾವು ಒಟ್ಟಿಗೆ ಸೇರಿ ಹರಟೆ ಹೊಡೆದಿದ್ದೇವೆ. ರಾಜ್ಯಸಭೆ, ವಿಧಾನ ಪರಿಷತ್ ಬಗ್ಗೆಯೂ ಚರ್ಚೆ ಆಗಿಲ್ಲ. ಸರ್ಕಾರ ಭದ್ರವಾಗಿ ಇರುತ್ತೆ, ಬಂಡಾಯ ಮಾಡಿಲ್ಲ, ಬಂಡಾಯದ ಸೂಚನೆಯೂ ಇಲ್ಲ. ಸಭೆ ಸೇರಿದ್ದು ರೊಟ್ಟಿ ಊಟ ಹಾಗೂ ರತ್ನಗಿರಿಯ ಮಾವಿನ ಹಣ್ಣು ತಿನ್ನೋಕೆ ಮಾತ್ರ ಎಂದು ರಹಸ್ಯ ಸಭೆಯ ಬಗ್ಗೆ ಸ್ಪಷ್ಟನೆ ನೀಡಿದರು.
ಸಿಎಂ ಅವರು ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದೆರೇ, ನಾನು ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿ ಆಗೋದಿಲ್ಲ. ನಾವು ಬಂಡಾಯ ಶಾಸಕರೂ ಅಲ್ಲ, ಯಡಿಯೂರಪ್ಪ ಕರೆದಿದ್ದರೂ ನಾನು ಹೋಗಿಲ್ಲ. ಯಡಿಯೂರಪ್ಪ ಮುಂದೆ, ಹೈಕಮಾಂಡ್ ಮುಂದೆ ಸಚಿವ ಸ್ಥಾನ ಕೇಳುವುದಿಲ್ಲ ಎಂದು ಯತ್ನಾಳ್ ಸ್ಪಷ್ಟಪಡಿಸಿದರು.
ಮಾರ್ಮಿಕ ಉತ್ತರದಿಂದಲೇ ರಹಸ್ಯ ಸಭೆಯನ್ನು ಸಮರ್ಥಿಸಿಕೊಂಡ ಯತ್ನಾಳ್ ಅವರು, ಬಿಎಸ್ವೈ ನಾಯಕರೆಂದು ಒಪ್ಪಲಿಲ್ಲ ಹಾಗೂ ನಾಯಕತ್ವದ ಬದಲಾವಣೆ ಹೈಕಮಾಂಡ್ಗೆ ಬಿಟ್ಟಿದ್ದು ಎಂದರು.