ಬೆಂಗಳೂರು : ಒರಿಸ್ಸಾ ರಾಜ್ಯ ಹೂಡಿಕೆದಾರರ ಸಮಾವೇಶಕ್ಕೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಚಾಲನೆ ನೀಡಿದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೇಕ್ ಇನ್ ಓರಿಸ್ಸಾ - 2022 ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಪರಿಚಯಿಸಲಾಯಿತು. ಸಚಿವರಾದ ಪ್ರತಾಪ್ ಕೇಜ್ರಿದೇವ್, ಸರ್ಕಾರದ ಕಾರ್ಯದರ್ಶಿ ಹೇಮಂತ್ ಶರ್ಮಾ, ಮನೋಜ್ ಮಿಶ್ರಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಒಡಿಶಾದಲ್ಲಿ ಹೂಡಿಕೆಗೆ ವಿಫುಲ ಅವಕಾಶ : ಒಡಿಶಾ ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಅಲ್ಲಿನ ಸರ್ಕಾರದ ಉತ್ತೇಜನ ಸೇರಿದಂತೆ ವಿವಿಧ ವಿಚಾರಗಳ ಕುರಿತು ರಾಜ್ಯದ ಹೂಡಿಕೆದಾರರಿಗೆ ಮನವರಿಕೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಹೂಡಿಕೆದಾರರು ಭಾಗವಹಿಸಿದ್ದರು. ಕೈಗಾರಿಕೆ ಹೂಡಿಕೆಗೆ ಉತ್ತೇಜನ ಇದೆ. ವಿಶೇಷವಾಗಿ ಕಳೆದ 22 ವರ್ಷದಿಂದ ಗುಣಮಟ್ಟದ ಪ್ರಗತಿ ಒಡಿಶಾದಲ್ಲಿ ಆಗಿದೆ. ಸಿಎಂ ಆಗಿ ನವೀನ್ ಪಟ್ನಾಯಕ್ ಐದನೇ ಅವಧಿಯನ್ನು ಮುಂದುವರಿಸಿದ್ದಾರೆ. ರಾಜಕೀಯ ಸ್ಥಿರತೆ ಇದ್ದು, ಕೈಗಾರಿಕೆ ಉತ್ತೇಜನ, ಹೂಡಿಕೆದಾರರಿಗೆ ವಿಶೇಷ ಅವಕಾಶ ಇದೆ ಎಂದು ತಿಳಿಸಲಾಯಿತು.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಾತನಾಡಿ, ತಂತ್ರಜ್ಞಾನ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕ ಹೆಸರು ಮಾಡಿದೆ. ಅದೇ ರೀತಿ ಒಡಿಶಾ ಕೈಗಾರಿಕಾ ಕ್ರಾಂತಿ ಜತೆ ಎಲ್ಲಾ ಕ್ಷೇತ್ರಗಳ ಪ್ರಗತಿಗೂ ಉತ್ತೇಜನ ನೀಡುತ್ತಿದೆ. ದೇಶದಲ್ಲೇ ಒಡಿಶಾ ಸಾಕಷ್ಟು ಕ್ಷೇತ್ರದ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ ಎಂದರು.
ಮೇಕ್ ಇನ್ ಒಡಿಶಾ ಕಾರ್ಯಕ್ರಮ : ಮೇಕ್ ಇನ್ ಒಡಿಶಾ ಕಾರ್ಯಕ್ರಮ ನಮ್ಮ ರಾಜ್ಯಕ್ಕೆ ಹೂಡಿಕೆದಾರರನ್ನು ಕರೆಸಲು ಸಹಕಾರಿಯಾಗಿದೆ. ಉತ್ತಮ ಮೂಲಸೌಕರ್ಯವನ್ನು ನಿರೀಕ್ಷೆಗೂ ಮೀರಿ ನೀಡುತ್ತೇವೆ. ನಮ್ಮ ರಾಜ್ಯದಲ್ಲಿ ಹೂಡಿಕೆ ಮಾಡಲು ಬಂದು ಹೊಸ ಕೈಗಾರಿಕಾ ಯುಗ ಸ್ಥಾಪಿಸಲು ಹೊರಟಿರುವ ನಮ್ಮ ಜತೆ ಕೈಜೋಡಿಸಿ ಎಂದು ಮನವಿ ಮಾಡಿದರು.
22 ವರ್ಷಗಳ ಸ್ಥಿರ ಸರ್ಕಾರ : ಸಚಿವ ಪ್ರತಾಪ್ ಕೇಜ್ರಿದೇವ್ ಮಾತನಾಡಿ, 22 ವರ್ಷಗಳ ಸ್ಥಿರ ಸರ್ಕಾರ ನಮ್ಮದಾಗಿದ್ದು, ನಮ್ಮ ಆಡಳಿತಕ್ಕೆ ಶಕ್ತಿ ತುಂಬಿದೆ. ಪ್ರಾಮಾಣಿಕ, ಪಾರದರ್ಶಕ, ಸ್ನೇಹಿ ಆಡಳಿತ ನೀಡಿದ್ದೇವೆ. ಪ್ರಾಮಾಣಿಕ, ಬದ್ಧತೆಯ ಭರವಸೆ ನೀಡಿ ಈಡೇರಿಸಿದ್ದೇವೆ. ಎಲ್ಲ ಕ್ಷೇತ್ರದಲ್ಲೂ ನಾವು ಉತ್ತಮ ಸಾಧನೆ ಮಾಡಿದ್ದೇವೆ. ಬದ್ಧತೆಯ ಕಾರ್ಯದಿಂದ ಒಡಿಶಾ ಇಂದು ಕೈಗಾರಿಕಾ ಹಬ್ ಆಗಿ ಪರಿವರ್ತನೆ ಗೊಂಡಿದೆ. ನಾವಿಂದು ಉತ್ಪಾದನಾ ಹಬ್ ಆರಂಭಿಸಿ ಹೊಸ ಆವಿಷ್ಕಾರದ ಅವಕಾಶ ತೆರೆದಿಟ್ಟಿದ್ದೇವೆ ಎಂದು ಹೇಳಿದರು.
ಸರ್ಕಾರದ ಕಾರ್ಯದರ್ಶಿ ಹೇಮಂತ್ ಶರ್ಮಾ ಮಾತನಾಡಿ, ರಾಜ್ಯದ ಆರ್ಥಿಕ ಸ್ಥಿರತೆ ಉತ್ತಮವಾಗಿದೆ. ಕಳೆದ ಎರಡು ವರ್ಷ ಕೋವಿಡ್ ಆತಂಕದ ನಡುವೆಯೂ ನಮ್ಮ ಆರ್ಥಿಕ ಸ್ಥಿರತೆಗೆ ಧಕ್ಕೆ ಎದುರಾಗಿಲ್ಲ. ಗಣಿಗಾರಿಕೆ ಕ್ಷೇತ್ರದಲ್ಲಿ ನಾವು ಅತ್ಯಂತ ದೊಡ್ಡ ಸಾಧನೆ ಮಾಡಿದ್ದೇವೆ. ವಿಶ್ವದ ಅತಿ ದೊಡ್ಡ ಪ್ರಥಮ ಮೂರು ಸ್ಟೀಲ್ ಪ್ಲ್ಯಾಂಟ್ ಓಡಿಶಾದಲ್ಲಿದೆ. 4 ಬಂದರುಗಳು ಇದ್ದು ದೇಶದ ದೊಡ್ಡ ಬಂದರು ನಮ್ಮದಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಕೈಗಾರಿಕೆ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.
ಕೈಗಾರಿಕಾ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ : 2030 ಕ್ಕೆ 130 ಮಿಲಿಯನ್ ಟನ್ ಸ್ಟೀಲ್ ಉತ್ಪಾದಿಸುವ ಗುರಿ ಹೊಂದಿದ್ದೇವೆ. ಉತ್ತಮ ಮಾನವ ಸಂಪನ್ಮೂಲ, ಕೈಗಾರಿಕೆಗಳಿಗೆ ಅಗತ್ಯ ಕಚ್ಚಾವಸ್ತು, ಉತ್ತಮ ವಾತಾವರಣ ನಮ್ಮಲ್ಲಿದೆ. ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ನಮ್ಮ ಸಾಧನೆ ಅತ್ಯುಪಯುಕ್ತವಾಗಿದೆ. ಕೈಗಾರಿಕೆ ಪ್ರಗತಿಯಲ್ಲಿ ನಮ್ಮ ರಾಜ್ಯ ರಾಷ್ಟ್ರದಲ್ಲೇ ಮುಂಚೂಣಿಯಲ್ಲಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿದೆ. ಇದರ ಲಾಭ ಕರ್ನಾಟಕದ ಹೂಡಿಕೆದಾರರು ಬಳಸಿಕೊಳ್ಳಬಹುದು ಎಂದರು.
ಹೂಡಿಕೆದಾರರು ಬಯಸಿದರೆ ನಿಮಗಾಗಿ 100 ಎಕರೆ ಜಾಗವನ್ನು 100 ದಿನದಲ್ಲಿ ಸಿದ್ಧಪಡಿಸಿ ಕೊಡುತ್ತೇವೆ. 52 ಇಲಾಖೆ ಸೇವೆ ಒಂದೇ ಸೂರಿನ ಅಡಿ ಲಭ್ಯ. ವಿವಿಧ ವಿಭಾಗದ ಸೇವೆಗಾಗಿ ಅಲೆದಾಡುವ ಅಗತ್ಯ ಇರುವುದಿಲ್ಲ. ಕೌಶಲ್ಯ ನಮ್ಮದು ಉತ್ತಮವಾಗಿದೆ.1.7 ಲಕ್ಷ ಪದವೀಧರರಿದ್ದಾರೆ. 197 ಎಂಜಿನಿಯರಿಂಗ್, 950 ಕೈಗಾರಿಕಾ ತರಬೇತಿ ಶಿಕ್ಷಣ ಸಂಸ್ಥೆಗಳಿವೆ. ನಾವು ನೀಡಿದ ಭರವಸೆ ನೀಡಿಕೆಗೆ ಬದ್ಧವಾಗಿದ್ದೇವೆ. ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದ್ದೇವೆ. ಇಲ್ಲಿನ ಗುಣಮಟ್ಟದ ಸೇವೆಯ ಲಾಭ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಇದನ್ನೂ ಓದಿ : ಅಂತಾರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕ ಶೀಘ್ರ ಸೇರ್ಪಡೆ: ಸಿಎಂ ಬೊಮ್ಮಾಯಿ