ಬೆಂಗಳೂರು: ಸೃಷ್ಟಿಕರ್ತನ ಜೀವರಾಶಿಯ ಸೃಷ್ಟಿಯಲ್ಲಿ ಅಂಗಾಂಗ ದಾನವು ಮಹತ್ವದ ದಾನಗಳಲ್ಲಿ ಒಂದಾಗಿದ್ದು, ಒಬ್ಬ ತಾಯಿ ತನ್ನ ಮಗುವಿಗೆ ಜೀವ ಹಾಗೂ ಜೀವನವನ್ನು ದಾನ ಮಾಡುತ್ತಾಳೆ. ಆದರೆ, ಒಬ್ಬ 37 ವರ್ಷದ ವ್ಯಕ್ತಿ ತನ್ನವರಲ್ಲದ 7 ಜನರಿಗೆ ತನ್ನ ಅಂಗಾಂಗಗಳನ್ನು ದಾನ ಮಾಡುವ ಮುಖಾಂತರ ಮಹಾದಾನಿ ಎನಿಸಿದ್ದಾನೆ.
ನಗರದ ಸಪ್ತಗಿರಿ ಆಸ್ಪತ್ರೆಯಲ್ಲಿ ಇಂತಹದೊಂದು ವಿಭಿನ್ನ ಪ್ರಕರಣ ನಡೆದಿದ್ದು, ಅಂಗಾಂಗ ದಾನ ಪಡೆದ 7ಮಂದಿಯೂ ಆರೋಗ್ಯವಾಗಿ ತಮ್ಮ ಹೊಸ ಜೀವನ ಆರಂಭಿಸಿದ್ದಾರೆ. ಹಲವು ಕಾರಣದಿಂದ ಅಂಗವೈಕಲ್ಯಕ್ಕೆ ಒಳಗಾಗಿದ್ದ 7 ಮಂದಿ ಬಾಳಲ್ಲಿ ಈಗ ಹೊಸ ಚೈತನ್ಯ ಮೂಡಿದೆ. ಅಲ್ಲದೇ ಸಪ್ತಗಿರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ವೈದ್ಯಕೀಯ ಲೋಕದಲ್ಲಿ ಗಮನ ಸೆಳೆದಿದ್ದಾರೆ.
ಸಪ್ತಗಿರಿ ಆಸ್ಪತ್ರೆಯ ಡೀನ್ ಹಾಗೂ ಪ್ರಾಂಶುಪಾಲರಾದ ವಿ.ಜಯಂತಿ ಈಟಿವಿ ಭಾರತದ ಜೊತೆ ಮಾತನಾಡಿ, ಡಿಸೆಂಬರ್ 1 ರಂದು 37 ವರ್ಷದ ವ್ಯಕ್ಯಿಯೊಬ್ಬರನ್ನು ತಲೆನೋವು ಹಾಗೂ ಬಳಲಿಕೆಯೆಂದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ತೀವ್ರವಾದ ಪಾರ್ಶ್ವವಾಯು ಇರುವುದು ದೃಢಪಟ್ಟಿತು. ತ್ವರಿತವಾಗಿ ಅಗತ್ಯ ಚಿಕಿತ್ಸೆ ನೀಡಿದರೂ ರೋಗಿಗೆ ಯಾವುದೇ ಚೇತರಿಕೆ ಕಾಣುವುದಿಲ್ಲ ಹಾಗೂ ಚಿಕಿತ್ಸೆಗೆ ದೇಹ ಸ್ಪಂದಿಸುವುದಿಲ್ಲ ಎಂದು ಕಂಡು ಬಂದಿತು. ಬಳಿಕ ಅವರ ಅಂಗಾಂಗಗಳ ದಾನ ಮಾಡಲು ಕುಟುಂಬಸ್ಥರಿಗೆ ಮನವಿ ಮಾಡಲಾಯಿತು ಎಂದರು.
ಮೆದುಳು ನಿಷ್ಕ್ರಿಯವಾಗಿದ್ದರಿಂದ ಸಂಬಂಧಿಕರಿಗೆ ವಿಷಯ ಬಹಿರಂಗ ಪಡಿಸಿ ಹಾಗೂ ಅಂಗಾಂಗ ದಾನದ ಬಗ್ಗೆ ವಿವರಿಸಲಾಯಿತು. ರೋಗಿಯ ಸಂಬಂಧಿಕರು ಅಂಗಾಂಗ ದಾನಕ್ಕೆ ತಕ್ಷಣವೇ ಒಪ್ಪಿಗೆ ಸೂಚಿಸಿದರು ಎಂದರು.
ಹೃದಯ, ಶ್ವಾಶಕೋಶ, ಯಕೃತ್ತು, ಎರಡು ಕಾರ್ನಿಯಾ ಎರಡು ಮೂತ್ರಪಿಂಡಗಳನ್ನು ನಗರದ ವಿವಿಧ ಆಸ್ಪತ್ರೆಗಳಲ್ಲಿ 7 ಅವಶ್ಯಕ ವಿಭಿನ್ನ ರೋಗಿಗಳಿಗೆ ದಾನ ಮಾಡಿಸಿ ಕಸಿ ಮಾಡಲಾಯಿತು. ದೇಹ ದಾನಕ್ಕೆ ವಿವಿಧ ಆಸ್ಪತ್ರೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಮತ್ತು ಸರ್ಕಾರ ಬೆಂಬಲಿತ ಜೀವನ್ ಸಾರ್ಥಕ ಎನ್ಜಿಓ ಸಂಸ್ಥೆಯ ಸಹಕಾರದಿಂದ, ಮೃತ ಸಂಬಂಧಿಕರ ಅನುಮತಿ ಹಾಗೂ ವಾಗ್ದಾನದ ನಂತರ ಅಂಗಾಂಗ ಕಸಿಗೆ ಮೊದಲು ನೋಂದಾಯಿತ ಅರ್ಹ ರೋಗಿಗಳ ಸ್ವೀಕಾರಾರ್ಹತೆಗೆ ಅನುಗುಣವಾಗಿ ಪರೀಕ್ಷೆಗೆ ಒಳಪಡಿಸಿ, ಪರೀಕ್ಷೆಗಳ ವರದಿಗಳ ಆಧಾರದ ಮೇಲೆ ಮೊದಲು ನೋಂದಾಯಿತ ರೋಗಿಗಳಿಗೆ ಅಂಗಗಳನ್ನು ಕಸಿ ಅಥವಾ ವರ್ಗಾವಣೆ ಮಾಡಲಾಯಿತು ಎಂದರು.