ಬೆಂಗಳೂರು: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡುತ್ತಿದೆ. ಇದರಿಂದಾಗಿ ಬಹುಮೂಲ್ಯವಾದ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗುತ್ತಿದೆ. ಮುಂದುವರಿದ ತಂತ್ರಜ್ಞಾನದ ಸದ್ಬಳಕೆ ಸಾಧ್ಯವಾಗುತ್ತಿದೆ ಎಂದು ಹರ್ಯಾಣದ ಮರೆಂಗೋ ಏಷ್ಯಾ ಆಸ್ಪತ್ರೆಗಳ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸಕ ಡಾ. ಕುಮುದ್ ಧಿತಾಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಬೆಂಗಳೂರಿನ 57 ವರ್ಷದ ರೋಗಿಯೊಬ್ಬರಿಗೆ ವಿಶಿಷ್ಟವಾದ ಶ್ವಾಸಕೋಶದ ಕಸಿ ಯಶಸ್ವಿಯಾಗಿ ಮಾಡುವ ಮೂಲಕ ದಾಖಲೆ ಬರೆದಿದ್ದೇವೆ. ನಗರದ ಅಪೋಲೊ ಆಸ್ಪತ್ರೆಗಳ ಶ್ವಾಸಕೋಶ ಶಾಸ್ತ್ರ ವಿಭಾಗದ ತಜ್ಞ ವೈದ್ಯರ ತಂಡ, ಚೆನ್ನೈನ ಕಾವೇರಿ ಆಸ್ಪತ್ರೆ ಮತ್ತು ಹರ್ಯಾಣದ ಫರಿದಾಬಾದ್‍ನ ಮರೆಂಗೋ ಏಷ್ಯಾ ಆಸ್ಪತ್ರೆಯ ವೈದ್ಯ ಸಹಯೋಗದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಅತ್ಯಂತ ಕ್ಲಿಷ್ಟಕರ, ಅಪರೂಪದ ಹಾಗೂ ತುಂಬಾ ನಾಜೂಕಾದ ಶಸ್ತ್ರಚಿಕಿತ್ಸೆ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಭಾರತ ಸಹ ಮುಂಚೂಣಿಯಲ್ಲಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಸಫಲವಾಗಿದೆ ಎಂದರು.
ಬೆಂಗಳೂರಿನ 57 ವರ್ಷದ ಮೀನಾಕ್ಷಿ (ಹೆಸರು ಬದಲಾಯಿಸಲಾಗಿದೆ) ಅವರು ಕಳೆದ ಎರಡು ವರ್ಷಗಳಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಉಸಿರುಗಟ್ಟುವಿಕೆ ಸಮಸ್ಯೆ ತೀರಾ ಹೆಚ್ಚಾದ ಕಾರಣ ಮೀನಾಕ್ಷಿ ಜಯನಗರದ ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಮಹಿಳೆಗೆ ವಿಭಿನ್ನವಾದ ಶ್ವಾಸಕೋಶದ ಕಾಯಿಲೆ ಇಂಟರ್ ಸ್ಟೀಷಿಯಲ್ ಶ್ವಾಸಕೋಶದ ಸಮಸ್ಯೆ ಇರುವುದು ತಪಾಸಣೆ ವೇಳೆ ಪತ್ತೆಯಾಗಿತ್ತು. ಈ ರೀತಿಯ ಆರೋಗ್ಯ ಸಮಸ್ಯೆ ಶ್ವಾಸಕೋಶದ ಫೈಬ್ರೋಸಿಸ್ ಅಥವಾ ಗಟ್ಟಿಯಾಗುವಿಕೆ ಸಮಸ್ಯೆಗೆ ಕಾರಣವಾಗುತ್ತದೆ. ಮಹಿಳೆಯ ಆರೋಗ್ಯಸ್ಥಿತಿ ನಿರಂತರ ಉಸಿರಾಟದ ತೊಂದರೆಗೆ ಕಾರಣವಾಗಿತ್ತು.
ಹೀಗಾಗಿ ಆಕೆಗೆ ತನ್ನ ಮನೆಯಲ್ಲಿ ನಿರಂತರ ಆಮ್ಲಜನಕದ ಬೆಂಬಲದ ಅಗತ್ಯ ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ರೋಗಿಗೆ ಶ್ವಾಸಕೋಶ ಕಸಿ ಹೊರತುಪಡಿಸಿದರೆ ಬೇರೆ ಯಾವುದೇ ಮಾರ್ಗ ಅನುಸರಿಸಿದರೂ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ ಎಂಬ ಅರಿವು ಮೂಡಿಸಲಾಯಿತು. ಈ ರೀತಿ ಶ್ವಾಸಕೋಶದ ಕಸಿ ಮಾಡಿಸಿಕೊಳ್ಳುವುದರಿಂದ ಉತ್ತಮ ಗುಣಮಟ್ಟದ ಜೀವನ ಮತ್ತು ದೀರ್ಘಾವಧಿ ಬದುಕುಳಿಯುವ ಸಂಭಾವ್ಯ ಪರಿಹಾರದ ಬಗ್ಗೆ ಮಾಹಿತಿ ನೀಡಿ ಭರವಸೆ ಮೂಡಿಸಿತ್ತು. ಆದರೂ ಈ ರೀತಿಯ ಚಿಕಿತ್ಸೆ ಪಡೆಲು ಆರಂಭದಲ್ಲಿ ಮಹಿಳೆ ಹಿಂಜರಿದಿದ್ದರು. ರೋಗಿ ಮತ್ತು ಆಕೆಯ ಕುಟುಂಬ ಅಂತಿಮವಾಗಿ ಅಪೋಲೋ ಆಸ್ಪತ್ರೆಯ ವೈದ್ಯಕೀಯ ತಂಡ ಮನವೊಲಿಸುವಲ್ಲಿ ಸಫಲವಾಯಿತು.
ಶ್ವಾಸಕೋಶದ ಕಸಿ ಮಾಡಿಸಿಕೊಳ್ಳಲು ಯುಗಾದಿ ಹಬ್ಬದ ಹಿಂದಿನ ದಿನವೇ ಸೂಕ್ತ ಎನ್ನುವುದನ್ನು ದಾನಿಗೆ ಕರೆ ಮಾಡಿ ಮಾಹಿತಿಯನ್ನೂ ನೀಡಲಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯ ಶ್ವಾಸ ಕೋಶ ಕಸಿ ಪೂರ್ವ ತಪಾಸಣೆ ಮತ್ತು ಇನ್ನಿತರೆ ಪರೀಕ್ಷೆಗಳ ಮೌಲ್ಯಮಾಪನಕ್ಕಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆಸ್ಪತ್ರೆಗೆ ದಾಖಲಾದ ಮೂವತ್ತಾರು ಗಂಟೆಗಳ ಸಮನ್ವಯದ ನಂತರ ಅಂತಿಮವಾಗಿ ಮಹಿಳೆಯ ಎರಡೂ ಕಡೆಯ ಶ್ವಾಸಕೋಶ ಕಸಿಯನ್ನು ಯಶಸ್ವಿಯಾಗಿ ಮಾಡಲಾಯಿತು. ಈ ಮೂಲಕ ವೈದ್ಯರ ತಂಡ ತಾವು ಕೈಗೊಂಡಿದ್ದ ಅಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಿಟ್ಟಿಸಿರು ಬಿಟ್ಟಿದ್ದರು ಎಂಬ ಮಾಹಿತಿ ನೀಡಿದರು.
ಅಂಗಾಂಗ ಕಸಿ ಕ್ಷೇತ್ರದಲ್ಲಿ ಅದರಲ್ಲಿಯೂ ಶ್ವಾಸ ಕೋಶದ ಕಸಿ ಅತ್ಯಂತ ಸಂಕೀರ್ಣ ಮತ್ತು ಕ್ಲಿಷ್ಟಕರವಾದದ್ದು. ಈ ರೀತಿಯ ಶಸ್ತ್ರಚಿಕಿತ್ಸೆ ಮಾಡುವುದು ಸುಲಭ ಸಾಧ್ಯವಲ್ಲ. ಪರಿಣಿತ ವೈದ್ಯಕೀಯ ತಂಡ ಕೂಡ ಅಗತ್ಯ ಮತ್ತು ಅನಿವಾರ್ಯ, ಇದರ ಜೊತೆಗೆ ತಾಂತ್ರಿಕ ಶಸ್ತ್ರಚಿಕಿತ್ಸಾ ಅಂಶಗಳಿಂದ ಮಾತ್ರವಲ್ಲದೆ, ಹೆಚ್ಚು ಮುಖ್ಯವಾಗಿ ಶ್ವಾಸಕೋಶ ಸೋಂಕಿಗೆ ಹೆಚ್ಚು ಒಳಗಾಗುತ್ತದೆ ಎಂಬ ಸರಳ ಸಂಗತಿಗಳಿಂದ ವಾತಾವರಣಕ್ಕೆ ತೆರೆದಿರುತ್ತದೆ, ಆದರೆ ಇತರ ಅಂಗಗಳಿಗಿಂತ ಭಿನ್ನವಾಗಿ, ಬಲವಾದ ರೋಗನಿರೋಧಕ ಪ್ರತಿಕ್ರಿಯೆಗಳಿಗೆ ಹೆಚ್ಚು ಒಳಗಾಗಬೇಕಾಗುತ್ತದೆ. ಶ್ವಾಸಕೋಶ ಕಸಿಯ ಸಮಯದಲ್ಲಿ ತುಸು ಹೆಚ್ಚು ಕಡಿಮೆ ಆದರೂ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿಯೇ ತಜ್ಞ ವೈದ್ಯರ ಅಗತ್ಯವಿದೆ, ಆಗ ಮಾತ್ರ ಹೆಚ್ಚಿನ ಅಪಾಯದಿಂದ ಪಾರಾಗಲು ಸಾಧ್ಯವಿದೆ ಎಂದರು.
ಅಪೊಲೋ ಆಸ್ಪತ್ರೆಗಳ ಸಮೂಹದ ಶ್ವಾಸಕೋಶ ಶಾಸ್ತ್ರ ವಿಭಾಗದ ತಂಡದ ನೇತೃತ್ವದ ವಹಿಸಿದ್ದ ಅಪೋಲೊ ಆಸ್ಪತ್ರೆಗಳ ಶ್ವಾಸಕೋಶ ಶಾಸ್ತ್ರ ಮತ್ತು ಮದ್ಯಸ್ಥಿಕೆ ಶ್ವಾಸಕೋಶ ಶಾಸ್ತ್ರ ಇಂಟರ್ವೆನ್ಷನಲ್ ಪಲ್ಮನಾಲಜಿಯ ಹಿರಿಯ ಸಲಹೆಗಾರ ಡಾ. ರವೀಂದ್ರ ಮೆಹ್ತಾ ಮಾತನಾಡಿ, ಸಾಮಾನ್ಯವಾಗಿ, ರೋಗಿ ಸಂಪೂರ್ಣ ಪೂರ್ವ ವಿಧಾನದ ಎಲ್ಲಾ ಮಾದರಿಯ ಪರೀಕ್ಷೆಗಳನ್ನು ವೈದ್ಯಕೀಯ ತಂಡ ನಡೆಸಿತ್ತು. ಆದರೆ ದಾನಿಯ ಶ್ವಾಸಕೋಶ ಉಸಿರಾಟದ ಸಮಸ್ಯೆಯಿಂದ ಬಳಲುವ ಮಹಿಳೆಗೆ ಹೊಂದಾಣಿಕೆ ಆಗುತ್ತದೆಯೋ ಇಲ್ಲವೇ ಎನ್ನುವುದನ್ನು ಶಸ್ತ್ರ ಚಿಕಿತ್ಸೆಯ ಮುಂಚೆ ಖಚಿತಪಡಿಸಿಕೊಳ್ಳುವುದು ನಮ್ಮ ಮುಂದಿದ್ದ ಸವಾಲು ಕೂಡ ಆಗಿತ್ತು.
ಸವಾಲನ್ನು ಯಶಸ್ವಿಯಾಗಿ ಪೂರ್ಣ ಮಾಡಿದ ನಂತರ ಮತ್ತು ಶ್ವಾಸ ಕೋಶ ರೋಗಿಗೆ ಹೊಂದಿಕೊಳ್ಳುತ್ತದೆ ಎನ್ನುವುದು ಖಚಿತವಾಗುತ್ತಿದ್ದಂತೆ ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು. ಶಸ್ತ್ರ ಚಿಕಿತ್ಸೆಯ ದಿನದಂದು ಶ್ವಾಸಕೋಶ ಶಾಸ್ತ್ರಜ್ಞರು, ಶಸ್ತ್ರ ಚಿಕಿತ್ಸಕರು, ಅರಿವಳಿಕೆ ತಜ್ಞರು ಮತ್ತು ತೀವ್ರ ನಿಘಾ ಘಟಕದ ವೈದ್ಯರ ತಂಡ ಒಟ್ಟುಗೂಡಿ ಶಸ್ತ್ರ ಚಿಕಿತ್ಸಕರು ಸಂಕೀರ್ಣ ಕಾರ್ಯ ವಿಧಾನದ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಆ ಬಳಿಕ ರೋಗಿಯ ತೀವ್ರ ನಿಗಾ ಘಟಕ –ಐಸಿಯುಗೆ ದಾಖಲಾದ ನಂತರ ಶಸ್ತ್ರ ಚಿಕಿತ್ಸೆಗೆ ನಿರ್ಧರಿಸಲಾಯಿತು. ಅದೃಷ್ಟವಶಾತ್, ದಾನಿ ಕೂಡ ಅಪೋಲೊ ಆಸ್ಪತ್ರೆಗಳಲ್ಲಿ ಆಂತರಿಕ ರೋಗಿಯಾಗಿದ್ದ ಹಿನ್ನೆಲೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆತಲು ಅಥವಾ ದಾನಿಯ ದಾನಿ ಅಂಗಗಳನ್ನು ತರಲು ಹಸಿರು ಕಾರಿಡಾರ್-ಅಗತ್ಯ ಎದುರಾಗಲಿಲ್ಲ.
13 ಗಂಟೆಗಳ ಸುದೀರ್ಘ ಶಶ್ತ್ರಚಿಕಿತ್ಸೆಯನ್ನು ನಾವು ಯಶಸ್ವಿಯಾಗಿ ನಡೆಸಿದೆವು ಎಂಬ ಮಾಹಿತಿ ಒದಗಿಸಿದರು. ಅಪೊಲೋ ಆಸ್ಪತ್ರೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಮನೀಶ್ ಮಟ್ಟೂ, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ ಜಯನಗರ ಘಟಕದ ಮುಖ್ಯಸ್ಥ ಡಾ. ಗೋವಿಂದಯ್ಯ ಯತೀಶ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಜಂಕ್ ಫುಡ್: ವೈದ್ಯರು