ಬೆಂಗಳೂರು: ವಿಧಾನ ಪರಿಷತ್ನಲ್ಲಿ ಅಂಗೀಕೃತಗೊಳ್ಳದ ಎಪಿಎಂಸಿ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಸಂಬಂಧ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಭೆ ನಿರ್ಧರಿಸಿದೆ.
ಇದೇ ವೇಳೆ ಮೇಲ್ಮನೆಯಲ್ಲಿ ತಿರಸ್ಕೃತವಾಗಿರುವ ಕಾರ್ಮಿಕ ವಿವಾದ ಮತ್ತು ಇತರೆ ಕೆಲ ಕಾನೂನುಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ ಸಂಬಂಧವೂ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ.
ಎಪಿಎಂಸಿ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಹಾಗೂ ಕಾರ್ಮಿಕ ವಿವಾದಗಳು ಮತ್ತು ಇತರೆ ಕೆಲ ಕಾನೂನುಗಳ (ಕರ್ನಾಟಕ ತಿದ್ದುಪಡಿ) ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದವು. ಆದರೆ ಮೇಲ್ಮನೆಯಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ ಹಾಗೂ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಅಂಗೀಕೃತವಾಗಿರಲಿಲ್ಲ.
ಕಾರ್ಮಿಕ ವಿವಾದಗಳು ಮತ್ತು ಇತರೆ ಕೆಲ ಕಾನೂನುಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ ತಿರಸ್ಕೃತವಾಗಿತ್ತು. ಹೀಗಾಗಿ ಸರ್ಕಾರಕ್ಕೆ ಸುಗ್ರೀವಾಜ್ಞೆ ಹೊರಡಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಸಂಪುಟದಲ್ಲಿ ಈ ಮೂರು ವಿಧೇಯಕಗಳ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಸಂಪುಟ ಸಭೆಯ ಇತರ ತೀರ್ಮಾನ ಏನು?:
- 2020-21ನೇ ಸಾಲಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ 76,000 ಕಟ್ಟಡ ಕಾರ್ಮಿಕರಿಗೆ ಅವಶ್ಯವಾದ ಮೇಸನ್ ಟೂಲ್ ಕಿಟ್‌ಗಳನ್ನು (Mason Tool Kit) 23.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ
- ಟಾಟಾ ಟೆಕ್ನಾಲಜೀಸ್ ಲಿ. ಸಹಭಾಗಿತ್ವದಲ್ಲಿ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು 4636.50 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಅನುಮೋದನೆ
- ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿತರಿಸಲು ವಿವಿಧ ವೃತ್ತಿಯ 8980 ಟೂಲ್ ಕಿಟ್‌ಗಳನ್ನು 11.75 ಕೋಟಿ ರೂ. ಮೊತ್ತದಲ್ಲಿ ಖರೀದಿಸಿ ಉಚಿತವಾಗಿ ವಿತರಣೆ
- ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL)ದೊಂದಿಗಿನ ರಿಯಾಯಿತಿ ಒಪ್ಪಂದದ ಅವಧಿ ರಿಯಾಯಿತಿ ವಿಸ್ತರಣೆ
- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಊಟಿ ಚಿನ್ನದ ಗಣಿಯಲ್ಲಿ ಭೂ ಕೆಳಮೈ ಗಣಿ ಅಭಿವೃದ್ಧಿ ಕಾರ್ಯಗಳ ಪರಿಷ್ಕೃತ ಅಂದಾಜು ಮೊತ್ತ 63.08 ಕೋಟಿ ರೂ. ಅನುಮೋದನೆ
- ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮಗಳು-2020ಕ್ಕೆ ಅನುಮೋದನೆ
- ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ತಾಂತ್ರಿಕ ಶಿಕ್ಷಣ ಇಲಾಖೆ ಬೋಧಕ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮಗಳು-2020ಕ್ಕೆ ಅನುಮೋದನೆ
- ಬೆಂಗಳೂರು ನಗರದ ಮಾಗಡಿ ರಸ್ತೆಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಆವರಣದಲ್ಲಿ ಡಾ. ಜಗಜೀವನ್ ರಾಮ್ ಸಂಶೋಧನೆ ಮತ್ತು ತರಬೇತಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ 98.93 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಅನುಮೋದನೆ
- ಶೈಕ್ಷಣಿಕವಾಗಿ ಹಿಂದುಳಿದ ಮುಸಲ್ಮಾನರಿಗೆ ಆಧುನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಸಲುವಾಗಿ ಮೌಲಾನಾ ಆಜಾದ್ ಟ್ರಸ್ಟ್ 25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ
- ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಪೊಲೀಸ್ ಕಾನ್ಸ್‌ಟೇಬಲ್, ಎಸ್ಐ, ಪೊಲೀಸ್ ಉಪಾಧೀಕ್ಷಕರ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಟುಗಳ ನೇರ ನೇಮಕಾತಿ) (ವಿಶೇಷ) ನಿಯಮ 2020ಕ್ಕೆ ಅನುಮೋದನೆ
- 2020-21ನೇ ಸಾಲಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ 90,000 ಕಟ್ಟಡ ಕಾರ್ಮಿಕರಿಗೆ ಅವಶ್ಯವಾದ ಸೇಫ್ಟಿ ಕಿಟ್‌ಗಳನ್ನು 42.39 ಕೋಟಿ ರೂ. ವೆಚ್ಚದಲ್ಲಿ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುನೋದನೆ.