ಬೆಂಗಳೂರು: ನ್ಯಾಯಾಲಯದ ಆದೇಶವಿದ್ದರೂ ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಬಂಧನಕ್ಕೆ ಆದೇಶ ಹೊರಡಿಸಿದ್ದ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ನ್ಯಾಯಾಧೀಶರ ಮುಂದಿರುವ ಮುರುಘಾ ಶರಣರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.
ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಎರಡನೇ ಎಫ್‌ಐಆರ್ ರದ್ದು ಕೋರಿ ಶಿವಮೂರ್ತಿ ಶರಣರ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಈ ಅರ್ಜಿ ವಿಚಾರಣೆ ನಡೆಸಿದರು. ನ್ಯಾಯಪೀಠದ ಎದುರು ಅರ್ಜಿದಾರರ ಪರ ವಕೀಲರು ತಮ್ಮ ವಾದ ಮಂಡಿಸಿ, ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಮುಂದಿರುವ ಸಾಕ್ಷ್ಯಗಳ ವಿಚಾರಣೆಯನ್ನು ಮತ್ತೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’’ಆರೋಪಿ ಯಾರೇ ಇರಲಿ ಅದು ನಮಗೆ ಮುಖ್ಯವಲ್ಲ. ಹೈಕೋರ್ಟ್ ಆದೇಶವನ್ನು ನಿಷ್ಪಲಗೊಳಿಸುವ ಯತ್ನವನ್ನು ನ್ಯಾಯಾಲಯ ಒಪ್ಪುವುದಿಲ್ಲ. ಹೈಕೋರ್ಟ್ ಆದೇಶ ಪಾಲಿಸದಿರುವ ಈ ಕ್ರಮ ಸರಿಯಾದುದಲ್ಲ. ಆದೇಶದ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಗಮನ ಹರಿಸಬಹುದಿತ್ತು, ಸ್ವಾಮೀಜಿ ವಿರುದ್ಧದ ಎರಡು ಪ್ರಕರಣಗಳಿಗೆ ಸಂಬಂಧಸಿದಂತೆ ಎಲ್ಲ ದಾಖಲೆಗಳನ್ನು ತನ್ನ ಮುಂದೆ ಇಡಬೇಕು. ಜೊತೆಗೆ ಈ ಆದೇಶದ ಪ್ರತಿಯನ್ನು ಪರಿಶೀಲನೆಗಾಗಿ ಮುಖ್ಯ ನ್ಯಾಯಮೂರ್ತಿಗಳ ಮುಂದಿಡಬೇಕು ಎಂದು ರಿಜಿಸ್ಟರ್ಗೆ ನಿರ್ದೇಶಿಸಿತು.
ಇದೇ ವೇಳೆ, ಮುರುಘಾ ಶರಣರ ಕೇಸ್ಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿರುವ ಸರ್ಕಾರದ ಅಭಿಯೋಜಕರ ವಿರುದ್ಧ ವಿಚಾರಣೆಗೆ ನ್ಯಾಯಪೀಠ ಆದೇಶ ನೀಡಿದೆ.
ಶರಣರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡುವ ಮುನ್ನ ಅವರ ವಿರುದ್ಧ ಜಿಲ್ಲಾ ನ್ಯಾಯಾಲಯವು ಬಾಡಿ ವಾರೆಂಟ್ ಜಾರಿ ಮಾಡಿತ್ತು. ನಂತರ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಅದರಿಂದ ಬಾಡಿ ವಾರೆಂಟ್ ಸಹ ಮೌಲ್ಯ ಕಳೆದುಕೊಂಡಿತು. ಇದರಿಂದ ನ.16ರಂದು ಜೈಲು ಅಧಿಕಾರಿಗಳು ಶರಣರನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಇದಾದ ನಂತರ ಬಾಡಿ ವಾರೆಂಟ್ ಹೊರಡಿಸಿದ ಹೊರತಾಗಿಯೂ ಹೈಕೋರ್ಟ್‌ನ ಆದೇಶ ಅನುಸರಿಸಿ ಆರೋಪಿಯನ್ನು ಹೇಗೆ ಬಿಡುಗಡೆ ಮಾಡಲಾಯಿತು ಎಂಬುದರ ವಿವರಣೆ ಕೇಳಿ ಜೈಲರ್‌ಗೆ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ನೋಟಿಸ್ ನೀಡಿದ್ದಾರೆ. ಜತೆಗೆ, ಹೈಕೋರ್ಟ್ ಆದೇಶದ ಜಾರಿಗೊಳಿಸಿದ ಜೈಲರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸೂಚಿಸಿದ್ದಾರೆ. ಇದು ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಕಿಡಿಕಾರಿದೆ.
ಇನ್ನೂ ಹೈಕೋರ್ಟ್ ನಿರ್ದೇಶದಂತೆ ಶರಣರು ತಮ್ಮ ಪಾಸ್‌ಪೋರ್ಟ್ ಅನ್ನು ವಶಕ್ಕೆ ನೀಡಿದ್ದಾರೆ. ಅದನ್ನು ದಾಖಲಿಸಿಕೊಳ್ಳದೆ, ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪಾಸ್‌ಪೋರ್ಟ್ ಅನ್ನು ಅದರ ನೈಜತೆಯ ಪರಿಶೀಲನೆಗೆ ಕಳುಹಿಸಿದ್ದಾರೆ. ಆ ಮೂಲಕ ಹೈಕೋರ್ಟ್ ಆದೇಶವನ್ನು ಪಾಲಿಸದೆ ಉಲ್ಲಂಘನೆ ಮಾಡಿದ್ದಾರೆ. ವಿಶೇಷ ನ್ಯಾಯಾಲಯದ ಮುಂದಿನ ಎಲ್ಲಾ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆಯಾಜ್ಜೆ ನೀಡಿದ್ದರೂ ಹಾಗೂ ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸದಂತೆ ಅರ್ಜಿದಾರರಿಗೆ ನಿರ್ಬಂಧ ಹೇರಿದ್ದರೂ ಶರಣರ ಖುದ್ದು ಹಾಜರಾತಿಗೆ ಸೂಚಿಸಿರುವುದು ಈಗಲೂ ನಿಗೂಢವಾಗಿದೆ. ಹೈಕೋರ್ಟ್‌ನ ಈ ಎರಡೂ ಆದೇಶಗಳನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಗಾಳಿಗೆ ತೂರಿದ್ದಾರೆ. ಈ ನಡೆ ನ್ಯಾಯಾಂಗದ ಶಿಸ್ತಿನ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳು ಸಂವಿಧಾನದ ನೈತಿಕತೆಯಿಂದ ನಿಯಂತ್ರಿತಲ್ಪಡುತ್ತದೆ ಹೊರತು ಸಾರ್ವಜನಿಕ ನೈತಿಕತೆಯಿಂದಲ್ಲ. ಸಂಚಲನ ಪ್ರಕರಣವನ್ನು ಲೈಮ್‌ಲೈಟ್‌ಲ್ಲಿ ಉಳಿಸುವ ಪ್ರಯತ್ನ ಇದಾಗಿದೆ ಎಂದು ನ್ಯಾಯಪೀಠ ತೀಕ್ಷ್ಣವಾಗಿ ನುಡಿದಿದೆ.
ಅರ್ಜಿದಾರ ಪರ ವಕೀಲರು, ವಾದ ಮುಂದುವರೆಸಿ, ಅರ್ಜಿದಾರರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದರೂ, ತಕ್ಷಣ ಬಿಡುಗಡೆ ಮಾಡುವುದಕ್ಕೆ ಆದೇಶಿಸಿರಲಿಲ್ಲ. ಬಿಡುಗಡೆ ಆದೇಶ ಹೊರಡಿಸಲು ವಿನಾ ಕಾರಣ ವಿಳಂಬ ಮಾಡಿದ್ದಾರೆ. ಇದರಿಂದ ಜಾಮೀನು ಪಡೆದ ಬಳಿಕವೂ ಮೂರು ದಿನಗಳ ಕಾಲ ಶರಣರು ಜೈಲಿನಲ್ಲಿರಬೇಕಾದ ಪರಿಸ್ಥಿತಿ ಬಂದೊದಗಿತ್ತು ಎಂದು ಪೀಠದ ಗಮನಕ್ಕೆ ತಂದರು.
ಜತೆಗೆ, ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರೂ ವಾರಂಟ್ ಜಾರಿ ಮಾಡಿ ಚಿತ್ರದುರ್ಗ ಜಿಲ್ಲೆಗೆ ಕರೆತರುವಂತೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಪಾಸ್‌ಪೋರ್ಟ್ ವಶಕ್ಕೆ ನೀಡಿದಾಗಲೂ ಅದರ ಪರಿಶೀಲನೆಗೆ ಪೊಲೀಸರ ತಂಡ ಕಳುಹಿಸಲಾಗಿದೆ ಎಂದು ತಮ್ಮ ವಾದದಲ್ಲಿ ಹೇಳಿದರು.
ಇದನ್ನೂ ಓದಿ: ನಾನು ಏನೂ ಹೇಳಲ್ಲ, ಈಗ ಮೌನಕ್ಕೆ ಜಾರುವೆ, ಮುಂದೆ ಮಾತನಾಡುವೆ: ಮುರುಘಾ ಶ್ರೀ