ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಖಾಲಿ ಇರುವ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಕಾರಾಗೃಹಗಳಲ್ಲಿ ಕೈದಿಗಳ ಆರೋಗ್ಯ ಸುರಕ್ಷತೆ ಹಾಗೂ ಜೀವನಮಟ್ಟ ಸುಧಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದ ಕಾರಾಗೃಹಗಳಲ್ಲಿ 114 ವೈದ್ಯಕೀಯ ಹುದ್ದೆಗಳಿದ್ದು, ಅವುಗಳಲ್ಲಿ 86 ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು 3 ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಮನವಿ ಪರಿಗಣಿಸಿದ ಪೀಠ ಮುಂದಿನ ಮೂರು ತಿಂಗಳ ಒಳಗೆ ಖಾಲಿ ಇರುವ ವೈದ್ಯಕೀಯ ಹುದ್ದೆಗಳ ಜತೆಗೆ ಅರೆ ವೈದ್ಯಕೀಯ ಹುದ್ದೆಗಳನ್ನೂ ಭರ್ತಿ ಮಾಡುವಂತೆ ನಿರ್ದೇಶಿಸಿದೆ. ಅಲ್ಲದೇ, ಜೈಲುಗಳಲ್ಲಿ ಸಂದರ್ಶಕರ ಭೇಟಿಗೆ ಯಾವ ರೀತಿ ವ್ಯವಸ್ಥೆ ಮಾಡಲಾಗಿದೆ ಎಂಬುದರ ಕುರಿತು ಪರಿಶೀಲನೆ ನಡೆಸಲು ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ದಿಢೀರ್ ಭೇಟಿ ನೀಡಿ ಪರಿಶೀಲಿಸುವಂತೆ ನಿರ್ದೇಶಿಸಿದೆ.
ಇದನ್ನೂ ಓದಿ: ಉದ್ಯಮಿಗೆ ಲಂಚ ಬೇಡಿಕೆಯಿಟ್ಟ ಎಎಸ್ಐ ವಿರುದ್ಧ ಎಸಿಬಿಗೆ ದೂರು
ಹಿಂದಿನ ವಿಚಾರಣೆ ವೇಳೆ ಕಾರಾಗೃಹಗಳಲ್ಲಿರುವ ಕೈದಿಗಳಿಗೆ ಸೂಕ್ತ ಆರೋಗ್ಯ ಸೇವೆ ಲಭ್ಯವಾಗುತ್ತಿರುವ ಕುರಿತು ಹೈಕೋರ್ಟ್ ಸರ್ಕಾರದಿಂದ ಮಾಹಿತಿ ಕೇಳಿತ್ತು. ಇದಕ್ಕೆ ಪ್ರತಿಕ್ರಿಸಿಯಿದ್ದ ಸರ್ಕಾರ, ಜೈಲುಗಳಲ್ಲಿ ವೈದ್ಯಕೀಯ, ಅರೆ ವೈದ್ಯಕೀಯ ಹುದ್ದೆಗಳು ಖಾಲಿ ಇರುವ ಮಾಹಿತಿಯನ್ನು ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿತ್ತಲ್ಲದೇ, ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿರುವ ವೈದ್ಯಕೀಯ ಸಿಬ್ಬಂದಿಯನ್ನೇ ವರ್ಗಾಯಿಸಲು ನಿರ್ದೇಶಿಸಿತ್ತು.