ಬೆಂಗಳೂರು: ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಮುಂದಿನ 48 ಗಂಟೆಗಳ ಕಾಲ ಮೂರೂ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಎಲ್ಲ ಭಾಗಗಳಲ್ಲೂ ಮುಂದಿನ 4 ದಿನ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸುಮಾರು 20 ಸೆಂ.ಮೀ ಗಿಂತ ಹೆಚ್ಚು ಮಳೆ ಆಗಲಿದೆ ಎಂದು ಹೇಳಿದೆ.
ಇನ್ನೂ ಮೂರು ದಿನ ಮಳೆ: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಳೆ ಇನ್ನೂ 3 ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.