ಬೆಂಗಳೂರು: ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬಂದವರನ್ನು ಕ್ವಾರಂಟೈನ್ ಮಾಡಲು ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಳಗಾಳ ಸಮೀಪದ ಹಿಂದುಳಿದ ವರ್ಗಗಳ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ, ಹೊರ ರಾಜ್ಯದಿಂದ ಬಂದವರನ್ನ ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿತ್ತು.
ಈ ವೇಳೆ ಹಾಸ್ಟೆಲ್ ಮುಂದೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿ, ಇದು ಜನವಸತಿ ಪ್ರದೇಶವಾಗಿದ್ದು, ಕ್ವಾರಂಟೈನ್ ಮಾಡಬಾರದು. ನಮಗೆ ಕೊರೊನಾ ಸೋಂಕು ಬಂದ್ರೆ ಏನ್ ಗತಿ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಈ ವೇಳೆ ಅನ್ನಪೂರ್ಣೆಶ್ವರಿ ನಗರ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಸುರಕ್ಷತೆ ಕೈಗೊಂಡು ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಹೇಳಿದರು.