ಬೆಂಗಳೂರು: ದೇಶ ನಿರೀಕ್ಷೆ ಮಾಡಿದಂತೆ ಇಂದಿನ ಪ್ರತಿ ಪಕ್ಷಗಳ ಸಭೆ ಯಶಸ್ವಿಯಾಗಿ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಈ ಸಭೆ ಭಾರತದ ಧ್ವನಿಯಾಗಿತ್ತು. ದೇಶದ ಎಲ್ಲ ಪ್ರತಿಪಕ್ಷಗಳ ನಾಯಕರು ಭಾರತವನ್ನು ರಕ್ಷಣೆ ಮಾಡುವ ತೀರ್ಮಾನ ಮಾಡಿದ್ದಾರೆ ಎಂದಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, "ಇಂದಿನ ಸಭೆಯು ಭಾರತದ ಧ್ವನಿಯಾಗಿದೆ.. ಅದರಲ್ಲಿ ಸಾಕಷ್ಟು ಶಕ್ತಿ ಇದೆ ಮತ್ತು ಎಲ್ಲಾ ವಿರೋಧ ಪಕ್ಷಗಳು ಭಾರತವನ್ನು ರಕ್ಷಿಸಲು ಬಯಸುತ್ತವೆ" ಎಂದು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಸಭೆಯ ಕುರಿತು ಮಾತನಾಡಿದ್ದರು.

ಬಿಜೆಪಿ ಇಷ್ಟು ದಿನ ಎನ್ಡಿಎ ಸಭೆ ಕರೆದಿಲ್ಲ. ಅವರು ಈಗ ಎಚ್ಚೆತ್ತುಕೊಂಡಿದ್ದಾರೆ. ಈಗಲಾದರೂ ಎನ್ಡಿಎ ಸ್ನೇಹಿತರು ಸಂತೋಷವಾಗಿರಬೇಕು. ಇಷ್ಟು ದಿನ ಎನ್ಡಿಎ ಅಗತ್ಯವಿಲ್ಲ.. ವಿರೋಧ ಪಕ್ಷಗಳನ್ನು ಏಕಾಂಗಿಯಾಗಿ ಎದುರಿಸುತ್ತೇನೆ ಎಂದು ಹೇಳುತ್ತಿದ್ದರು. ಈಗ ಅವರ ನಡೆ ನೋಡಿದರೆ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗುತ್ತದೆ. ಅದು ಅವರ ರಾಜಕೀಯ. ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಇಂಡಿಯಾ ಮೈತ್ರಿಕೂಟಕ್ಕೆ ಯಾರು ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂಬುದು ಸಮಯ ಉತ್ತರ ನೀಡುತ್ತದೆ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ ರಾಷ್ಟ್ರೀಯ ಪ್ರತಿಪಕ್ಷ ನಾಯಕರ ಸಭೆ ನಡೆದಿದ್ದು ಮಧ್ಯಾಹ್ನದ ಭೋಜನಕೂಟವನ್ನು ಡಿಕೆ ಶಿವಕುಮಾರ್ ಆಯೋಜಿಸಿದ್ದರು. ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಮಧ್ಯದಲ್ಲಿಯೇ ಮಹಾಘಟಬಂಧನ್ ಸಭೆ ಕೂಡ ನಗರದಲ್ಲಿ ನಡೆದಿದ್ದು, ಸಿಎಂ ಹಾಗೂ ಡಿಸಿಎಂ ಸಕ್ರಿಯವಾಗಿ ಸಭೆಯಲ್ಲಿ ಭಾಗಿಯಾಗಿದ್ದರು. ಇಂದು ಬೆಳಗ್ಗೆ ಸಭೆ ಆರಂಭವಾದ ಸಂದರ್ಭದಲ್ಲಿ ಮುಕ್ತಾಯದವರೆಗೂ ಡಿಕೆ ಶಿವಕುಮಾರ್ ಉಪಸ್ಥಿತರಿದ್ದರು.

ಕೆಪಿಸಿಸಿ ಅಧ್ಯಕ್ಷರು ಆಗಿರುವ ಹಿನ್ನೆಲೆ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ವಿಚಾರದಲ್ಲಿ ಇವರು ಒಂದಿಷ್ಟು ಮಾಹಿತಿ ಪಡೆಯುವ ಉದ್ದೇಶದಿಂದ ಸಭೆ ನಡೆದ ಖಾಸಗಿ ಹೋಟೆಲ್ನಲ್ಲಿ ಇದ್ದರು. ಸಭೆ ಮುಕ್ತಾಯದ ಬಳಿಕ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಸುದ್ದಿಗೋಷ್ಠಿ ಅವಧಿಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾತ್ರವಲ್ಲದೇ ಸಂಪುಟದ ಹಲವು ಸಚಿವರು ವಿಶೇಷ ಕಾಳಜಿ ವಹಿಸಿ ರಾಷ್ಟ್ರೀಯ ಪ್ರತಿಪಕ್ಷ ನಾಯಕರ ಆಗಮನ ಹಾಗೂ ನಿರ್ಗಮದ ಸಂದರ್ಭ ಬರಮಾಡಿಕೊಳ್ಳುವ ಹಾಗೂ ಬೀಳ್ಕೊಡುವ ಕಾರ್ಯವನ್ನು ಮಾಡಿದರು. ಎರಡು ದಿನಗಳ ರಾಷ್ಟ್ರೀಯ ನಾಯಕರ ಭೇಟಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುಗಿದಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾತ್ರ ಅತ್ಯಂತ ಪ್ರಮುಖವಾಗಿ ಕಂಡು ಬಂತು.
ಮೈತ್ರಿಕೂಟಕ್ಕೆ ಇಂಡಿಯಾ ಎಂಬ ಹೆಸರಿಟ್ಟ ನಾಯಕರು: ಮಹಾಘಟಬಂಧನಕ್ಕೆ ಇಂಡಿಯಾ (INDIA) ಎಂಬ ಹೆಸರನ್ನು ಇರಿಸಲಾಗಿದ್ದು, ಸರ್ವಾನುಮತದಿಂದ ನಿರ್ಧಾರ ಕೈಗೊಂಡಿರುವ ಕೇಂದ್ರದ ಪ್ರತಿಪಕ್ಷಗಳು ಇದರ ಜೊತೆ ಒಂದಿಷ್ಟು ಸಂಕಲ್ಪಗಳನ್ನು ಸಹ ತೊಟ್ಟಿದ್ದಾರೆ. ಇಂಡಿಯಾಗೆ ಸೇರಿದ 26 ರಾಜಕೀಯ ಪಕ್ಷಗಳು ಸಾಮೂಹಿಕ ಸಂಕಲ್ಪ ಮಾಡಿವೆ. ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಅಂತಿಮ ಸಂಕಲ್ಪ ಕೈಗೊಳ್ಳಲಾಗಿದೆ.