ಬೆಂಗಳೂರು: ಬಡವರಿಗೆ ಸಹಾಯವಾಗಲಿ, ಕಷ್ಟಕ್ಕೆ ಅನುಕೂಲವಾಗಲಿ ಎಂಬ ಉದ್ದೇಶಕ್ಕೆ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿರ್ಮಿಸುವವರು ಬಹಳ ಕಡಿಮೆ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಯಶಸ್ವಿನಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಸ್ಥೆಯ ಆರನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಇಂದು ಬೆಂಗಳೂರಿನ ಜಯನಗರದ 2ನೇ ಹಂತ (ಮಾಧವನ್ ಪಾರ್ಕ್ ಹತ್ತಿರ) ನಡೆಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾರ್ವಜನಿಕ ಸೇವೆಯಲ್ಲಿರುವ ನಮ್ಮಂಥವರು ಇಂತಹ ಸಾಮಾಜಿಕ ಕಳಕಳಿ ಉಳ್ಳಂತಹ ಕಾರ್ಯವನ್ನು ಮಾಡಿದಾಗ ನಾಲ್ಕು ಜನರಿಗೆ ಅನುಕೂಲ ಆಗುತ್ತದೆ ಎಂದರು.
ಓದಿ: ಬಿಜೆಪಿ ಯಾರನ್ನೂ ಕಡೆಗಣಿಸಲ್ಲ, ನಿಷ್ಠೆಯಿಂದ ಕೆಲಸ ಮಾಡಿ: ಪ್ರಕೋಷ್ಠ ಪ್ರಮುಖರಿಗೆ ಕಟೀಲ್ ಕರೆ
ಸಹಕಾರ ಕ್ಷೇತ್ರದ ಬಗ್ಗೆ ನನಗೆ ಅಪಾರ ವಿಶ್ವಾಸವಿದ್ದು, ನಾನು ಕೂಡ ಇಲ್ಲಿ ಅನುಭವ ಹೊಂದಿದ್ದೇನೆ. ನಾನು ಕೂಡ 25 ವರ್ಷಗಳ ಹಿಂದೆ ನಮ್ಮ ತಾಲೂಕಿನಲ್ಲಿ ಬೀಳಗಿ ಪಟ್ಟಣ ಸಹಕಾರಿ ಸಂಘ ಸ್ಥಾಪಿಸಿದೆ. ಇದಾದ ಬಳಿಕ ಬಾಪೂಜಿ ಸೌಹಾರ್ದ ಸಹಕಾರ ಸಂಘ ಕೂಡ ಸ್ಥಾಪಿಸಿದ್ದೇನೆ. ಕಷ್ಟದಲ್ಲಿರುವವರಿಗೆ ಸಹಕಾರ ನೀಡುವುದು ಇಂತಹ ಸಂಸ್ಥೆಗಳ ಕಾಯಕ ಎಂದು ಹೇಳಿದರು.