ಬೆಂಗಳೂರು: ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಜನರ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯ ನಾಯಕರು ಹೋದಾಗ ಕನಿಷ್ಠ ಮನೆಯ ಬಾಗಿಲನ್ನೂ ತೆರೆಯುವ ಕಾರ್ಯ ಮಾಡಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಭಾಗ್ಯದ ಬಾಗಿಲು ತೆರೆಯುವ ಮಾತನಾಡಿದ ಮೋದಿಗೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಕನಿಷ್ಠ ಸೌಜನ್ಯವಿಲ್ಲ. ಇಲ್ಲಿನ ಪ್ರಗತಿ ತಮ್ಮ ಭಾಷಣದಲ್ಲಿ ಬಗ್ಗೆ ಒಂದೂ ಮಾತನಾಡಿಲ್ಲ. ಇಲ್ಲಿನ ಬಿಜೆಪಿ ಹಾಗೂ ಅನ್ಯಪಕ್ಷದ ನಾಯಕರ ಭೇಟಿಗೂ ಅವಕಾಶ ಕೂಡ ನೀಡಿಲ್ಲ ಎಂದು ಟೀಕಿಸಿದ್ರು.
ಅಭಿವೃದ್ಧಿ ಮಾಡಲಾಗದ ಸಿಎಂ ಬಿ.ಎಸ್.ಯಡಿಯೂರಪ್ಪ ದುರ್ಬಲ ಮುಖ್ಯಮಂತ್ರಿ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವಂತೆ ಕರ್ನಾಟಕದಲ್ಲೂ ಅದೇ ಸರ್ಕಾರ ಇದ್ದರೆ ರಾಜ್ಯದ ಭಾಗ್ಯದ ಬಾಗಿಲು ತೆರೆಯಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡಿದ್ದರು. ಮೋದಿ ಬಳಿ ಏನನ್ನೂ ಕೇಳಲು ಬಿಜೆಪಿ ನಾಯಕರು ಭಯಬೀಳುತ್ತಾರೆ. ಅದಕ್ಕೆ ಯಡಿಯೂರಪ್ಪ ದುರ್ಬಲ ಸಿಎಂ ಅಂತಾ ಹೇಳಿದ್ದೆ ಎಂದರು.
ನಿನ್ನೆ ತುಮಕೂರಿನಲ್ಲಿ ಯಡಿಯೂರಪ್ಪ ನೆರೆ ಪರಿಹಾರಕ್ಕೆ ಗೋಗರೆದಿದ್ದಾರೆ. ಇದಕ್ಕೆ ಮೋದಿ ಪ್ರತಿಕ್ರಿಯೆಯನ್ನೇ ನೀಡಲಿಲ್ಲ. ಕನಿಷ್ಠ ಪಕ್ಷ ಪರಿಶೀಲಿಸುತ್ತೇನೆ ಅಂತಲಾದ್ರೂ ಹೇಳಬಹುದಾಗಿತ್ತು ಎಂದರು.
ಮಠದಲ್ಲಿ ರಾಜಕೀಯದ ಮಾತು:
ತುಮಕೂರು ಸಿದ್ದಗಂಗಾ ಮಠದ ಕಾರ್ಯಕ್ರಮದಲ್ಲಿ ಮಕ್ಕಳ ಮುಂದೆ ರಾಜಕೀಯದ ವಿಚಾರ ಮಾತನಾಡಿದ್ದಾರೆ. ಪಾಕಿಸ್ತಾನ ದುಷ್ಟರಾಷ್ಟ್ರ ಅನ್ನುವುದನ್ನು ಒಪ್ಪುತ್ತೇನೆ. ಅವರು ಮಾಡುವುದು ತಪ್ಪು. ಆದರೆ ಧರ್ಮ, ಸಂವಿಧಾನದ ವಿರುದ್ಧವಾಗಿ ಸಿಎಎ, ಎನ್ಆರ್ಸಿ ಬಗ್ಗೆ ಯಾಕೆ ನಿರ್ಧಾರ ತೆಗೆದುಕೊಂಡಿರಿ? ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಎಲ್ಲರ ಮುಂದೆ ಒಂದೇ ಭಾಷಣ ಮಾಡುತ್ತಿದ್ದಾರೆ. ನಿರುದ್ಯೋಗ ಸಮಸ್ಯೆ ನಿವಾರಣೆ, ರೈತರ ಆದಾಯ ದುಪ್ಪಟ್ಟು ಮಾಡಿಲ್ಲ. ಬದಲಾಗಿ ಜನರ ಸಂಕಷ್ಟ ದುಪ್ಪಟ್ಟಾಗಿದೆ. ಮಹದಾಯಿ ಸಮಸ್ಯೆ ಪರಿಹರಿಸಿಲ್ಲ. ಬಿಎಸ್ವೈ, ಮೋದಿ, ಜಾವಡೇಕರ್ ಎಲ್ಲರೂ ಸುಳ್ಳನ್ನೇ ಹೇಳಿದ್ದಾರೆ. ಮೋದಿ ನೀಡಿದ ಶೇ. 90 ರಷ್ಟು ಭರವಸೆಗಳನ್ನು ಈಡೇರಿಸಿಲ್ಲ ಎಂದರು.
ರಾಜ್ಯಕ್ಕೆ ಬಂದಾಗೆಲ್ಲಾ ಸುಳ್ಳು ಹೇಳಿ ಹೋಗುತ್ತಾರೆ:
ರಾಜ್ಯಕ್ಕೆ ಬಂದಾಗ ಮತ್ತೆ ರೈತರ ಬಗ್ಗೆ, ಪ್ರವಾಹ ಪರಿಹಾರದ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ. ಸ್ವರ್ಗ ಸೃಷ್ಟಿಸಿ ತಮಾಷೆ ಪೆಟ್ಟಿಗೆ ತೋರಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಮಾತಿಂದ ಜನರ ಹೊಟ್ಟೆ ತುಂಬಲ್ಲ. ದೇಶದಲ್ಲಿ ಇವತ್ತು ಆರ್ಥಿಕ ಪರಿಸ್ಥಿತಿ ಏನಾಗಿದೆ? ಜಿಡಿಪಿ ಅತ್ಯಂತ ತಳಮಟ್ಟಕ್ಕೆ ಹೋಗಿದೆ. 4.5 ರಷ್ಟು ಜಿಡಿಪಿ ಇದೆ ಅಂತಾರೆ, ಆದರೆ ಅಸಲಿ ಶೇ 2.5 ಕ್ಕೆ ಕುಸಿದಿದೆ. ಮನಮೋಹನ್ ಸಿಂಗ್ ಕಾಲದಲ್ಲಿ ಶೇ. 8-9 ಇತ್ತು ಜಿಡಿಪಿ ಇತ್ತು. ಕಳೆದ ಆರು ವರ್ಷದಲ್ಲಿ ಮೋದಿ ರಾಷ್ಟ್ರವನ್ನು ಆರ್ಥಿಕ ತಳಮಟ್ಟಕ್ಕೆ ಕೊಂಡೊಯ್ದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ನನ್ನ ಐದು ವರ್ಷ ಅವಧಿಯಲ್ಲಿ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿಸಿದ್ದೆ. ಕೇಂದ್ರದ ರೀತಿ ರಾಜ್ಯದಲ್ಲೂ ಆರ್ಥಿಕ ಸ್ಥಿತಿ ತಳಮಟ್ಟಕ್ಕೆ ಕುಸಿಯುತ್ತಿದೆ ಎಂದರು. ಕೇಂದ್ರದಿಂದ ರಾಜ್ಯಕ್ಕೆ ವಿವಿಧ ಮೂಲದಿಂದ ಬರುವ ಹಣ ಬರುತ್ತಿಲ್ಲ. ಬಂಡವಾಳ ಹೂಡಿಕೆ ಆಗುತ್ತಿಲ್ಲ, ತೆರಿಗೆ ಸಂಗ್ರಹ ಸರಿಯಾಗಿ ಆಗುತ್ತಿಲ್ಲ. ನೋಟು ಅಮಾನ್ಯ, ಅವ್ಯವಸ್ಥಿತ ತೆರಿಗೆ ಪದ್ಧತಿ, ಸಿಎಸ್ಟಿ ಜಾರಿ ಇತ್ಯಾದಿ ದೇಶವನ್ನು ಅಧ:ಪಥನದತ್ತ ಕೊಂಡೊಯ್ದಿದೆ. ಬ್ಯಾಂಕ್ ದಿವಾಳಿಯಾಗಿದೆ. ಸಾಲ ಸಿಗುತ್ತಿಲ್ಲ. ಕೇಂದ್ರ ಹಣಕಾಸು ಸಚಿವರಿಗೆ ಏನೂ ಅರ್ಥ ಆಗುತ್ತಿಲ್ಲ. ಈ ಹಿಂದೆ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಏನೇನು ಭರವಸೆ ನೀಡಿದ್ದರು ಎಂಬುದನ್ನು ಅವರೇ ನೆನಪಿಸಿಕೊಳ್ಳಲಿ. ಫುಡ್ ಪಾರ್ಕ್‌ನಿಂದ ಸಾವಿರಾರು ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು. ಅದ್ಯಾವುದೂ ಆಗಲೇ ಇಲ್ಲ. ಅದೆಲ್ಲ ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ ಎಂದರು.
ಒಂದು ಟ್ವೀಟ್ ಕೂಡ ಮಾಡಲಿಲ್ಲ:
ರಾಜ್ಯದಿಂದ ಹೆಚ್ಚು ಸಂಸದರ ಕಾರಣಕ್ಕಾದ್ರೂ ಸ್ಪಂದಿಸಬೇಕಿತ್ತು. ಪ್ರವಾಹದ ಸಂದರ್ಭದಲ್ಲಿ ಪ್ರಧಾನಿ ರಾಜ್ಯಕ್ಕೆ ಬರಲಿಲ್ಲ. ರಾಜ್ಯದ ಜನರು ಕಷ್ಟ, ನಷ್ಟಗಳಿಂದ ತತ್ತರಿಸಿದ್ದಾರೆ. ಸಣ್ಣ ಸಣ್ಣ ವಿಷಯಗಳಿಗೂ ಟ್ವೀಟ್ ಮಾಡುತ್ತಾರೆ. ಹೀಗಿರುವಾಗ ರಾಜ್ಯಕ್ಕೆ ಬಗ್ಗೆ ಬರುವುದಿರಲಿ, ಟ್ವೀಟ್ ಮಾಡಬಹುದಾಗಿತ್ತು. ದೇಶದ ಜನರ ಕಷ್ಟ ಆಲಿಸಬೇಕಾದ್ದು ಪ್ರಧಾನಿ ಕರ್ತವ್ಯ. ಈ ವಿಚಾರದಲ್ಲಿ ಮೋದಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಬಾರಿ ಪ್ರವಾಹದಿಂದ ಒಂದು ಲಕ್ಷ ಕೋಟಿ ರೂಗೂ ಹೆಚ್ಚು ನಷ್ಟವಾಗಿದೆ. ರಾಜ್ಯ ಸರ್ಕಾರ ಕೇಂದ್ರಕ್ಕೆ 38 ಸಾವಿರ ಕೋಟಿ ರೂ ನಷ್ಟದ ವರದಿ ಕಳುಹಿಸಿತ್ತು. ಕೇಂದ್ರ ಆಗ ಕೊಟ್ಟಿದ್ದು ಕೇವಲ 1,200 ಕೋಟಿ ರೂ ಮಧ್ಯಂತರ ಪರಿಹಾರ ಮಾತ್ರ. ಚಂದ್ರಯಾನ ವರ್ಷದ ವೀಕ್ಷಣೆಗೆ ರಾಜ್ಯಕ್ಕೆ ಬಂದರೂ ಯಾರ ಭೇಟಿಗೂ ಅವಕಾಶ ನೀಡಲಿಲ್ಲ. ಪ್ರವಾಹದ ಬಗ್ಗೆ ಸೌಜನ್ಯಕ್ಕಾದರೂ ಮಾತನಾಡಬಹುದಾಗಿತ್ತು. ಅದನ್ನೂ ಮಾತನಾಡಲೇ ಇಲ್ಲ ಎಂದು ಸಿದ್ದರಾಮಯ್ಯ ಆರೋಪಗಳ ಸುರಿಮಳೆಗೈದ್ರು.