ಬೆಂಗಳೂರು: ಕೋವಿಡ್ ಆತಂಕದ ಈ ಸಂದರ್ಭದಲ್ಲಿ ನಮ್ಮ ಸರ್ಕಾರ ಇದ್ದಿದ್ದರೆ 10 ಕೆ.ಜಿ ಅಕ್ಕಿ ಹಾಗು 10 ಸಾವಿರ ರೂ.ಪರಿಹಾರ ಕೊಡುತ್ತಿದ್ದೆವು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ಇಂದು ಯುವ ಕಾಂಗ್ರೆಸ್ ಆಯೋಜಿಸಿದ್ದ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಪ್ರತಿಯೊಬ್ಬರಿಗೂ 10 ಸಾವಿರ ರೂ ಕೊಡಿ ಎಂದು ಒತ್ತಾಯ ಮಾಡಿದ್ವಿ. ಆದರೆ ಇವರು 2 ಕೆ.ಜಿ ಅಕ್ಕಿ ಕೊಡ್ತಿದ್ದಾರೆ. 10 ಕೆ.ಜಿ ಕೊಟ್ಟಿದ್ದರೆ ಇವರ ಗಂಟೇನು ಹೋಗ್ತಿತ್ತಾ? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
'ಹಮಾರಾ ಕುತ್ತಾ ಹಮಾರೆ ಗಲ್ಲಿಮೇ ಶೇರ್':
ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಅವನು ಸೂರ್ಯ ಅಲ್ಲ ಕತ್ತಲು. ರವಿ ಸುಬ್ರಮಣ್ಯ ಏನು ಮಾಡ್ತಿದ್ದಾರೆ? ಎಂದು ಕೇಳಬೇಕು. ಯಡಿಯೂರಪ್ಪ ಅವರೇ ಸ್ವತಃ 'ಹಮಾರಾ ಕುತ್ತಾ ಹಮಾರೆ ಗಲ್ಲಿಮೇ ಶೇರ್' ತರಹ ಆಡ್ತಿದ್ದಾರೆ. 15ನೇ ಪೇ ಕಮಿಷನ್ ವರದಿಯಂತೆ ನಮಗೆ 5,495 ಕೋಟಿ ಹಣ ಬರಬೇಕು. ಯಾರು ಸಹ ತುಟಿ ಬಿಚ್ಚಲ್ಲ. ನಾನು ಸಿಎಂ ಆಗಿದಿದ್ದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಕಚೇರಿ ಮುಂದೆ ಧರಣಿ ಮಾಡ್ತಿದ್ದೆ. ಸಿಎಂಗೆ ತೆಗೆಯುತ್ತಾರೆ ಎಂದು ಭಯ. ಇಂತಹ ಸರ್ಕಾರ ಬೇಕಾ? ಬಸವನಗುಡಿ ಜನ ದಯವಿಟ್ಟು ಬಿಜೆಪಿಗೆ ಮತ ಹಾಕಬೇಡಿ ಎಂದರು.
ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ಕೋವಿಡ್ ಬರಬಹುದು ಎಂದು ನಮ್ಮ ಡಾಕ್ಟರ್ ಮಂಜುನಾಥ್ ಹೇಳಿದ್ದಾರೆ. ಮಕ್ಕಳಿಗೆ ಬರಬಹುದು ಎಂದು ಹೇಳಿದ್ದಾರೆ. ತಜ್ಞರು ಹೇಳಿದ್ರೂ ಸಹ ಇವರು ಜಾಗ್ರತೆ ವಹಿಸುತ್ತಿಲ್ಲ. ಬಡವರಿಗೆ ಇಂದಿರಾ ಕ್ಯಾಂಟಿನ್ ಮಾಡಿದೆ. ಆದ್ರೆ ಅದನ್ನು ಮುಚ್ಚಿದ್ರು. ಇವರು ಮನೆ ಹಾಳಾಗ. ಈ ದೇಶದಲ್ಲಿ ರಾಜಕಾರಣದ ಸೂರ್ಯ ಇದ್ರೆ ಅದು ಅಂಬೇಡ್ಕರ್ ಮಾತ್ರ. ಉಳಿದವರು ಯಾರು ಸೂರ್ಯನೂ ಅಲ್ಲ, ಚಂದ್ರನೂ ಅಲ್ಲ ಎಂದರು.
ಮೇಕೆದಾಟು ಯೋಜನೆ ವಿಚಾರ ಪ್ರಸ್ತಾಪಿಸಿ, ಯಡಿಯೂರಪ್ಪ ಸ್ಟಾಲಿನ್ಗೆ ಪತ್ರ ಬರೆದಿದ್ದೇ ತಪ್ಪು. ನಾವು ಡ್ಯಾಂ ಕಟ್ಟಲು ಅವರ ಅನುಮತಿ ಯಾಕೆ ಬೇಕು? ನಮ್ಮ ಕೆಲಸ ನಾವು ಮಾಡಬೇಕು. ಕೋರ್ಟ್ ಆದೇಶದಂತೆ ನಾವು ಕೆಲಸ ಮಾಡಬೇಕು. ಇವರು ಪತ್ರ ಬರೆದಿದ್ದಕ್ಕೆ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರ ಬರೆದು ಅನುಮತಿ ಕೇಳಿದ್ರೆ ಯಾರೂ ಒಪ್ಪಲ್ಲ. ಡ್ಯಾಂ ಕಟ್ಟೋದರಿಂದ ಅವರ ಪಾಲಿನ ನೀರಿಗೆ ಸಮಸ್ಯೆ ಆಗಲ್ಲ. ನಮ್ಮ ಸರ್ಕಾರ ಇದ್ದಾಗ ನೀರಿನ ವಿಚಾರದಲ್ಲಿ ಪತ್ರ ಬರೆದು ಅನುಮತಿ ಕೇಳಿಲ್ಲ ಎಂದರು.
ಯತ್ನಾಳ ವಿರುದ್ಧ ಆಕ್ರೋಶ:
ಸಿಎಂ ಜತೆ ವಿಪಕ್ಷಗಳು ಶಾಮೀಲು ಅನ್ನೋ ಯತ್ನಾಳ್ ಹೇಳಿಕೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅಂತಹ ಭ್ರಷ್ಟಾಚಾರ ಸರ್ಕಾರದಲ್ಲಿ ಇವರೇಕೆ ಶಾಸಕನಾಗಿ ಮುಂದುವರೆಯಬೇಕು. ಬಹಳ ದಿನದಿಂದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಆದ್ರೆ ಅಂತಹ ಕಡೆ ಶಾಸಕನಾಗಿ ಮುಂದೂವರೆದಿದ್ದು ಯಾಕೆ? ನಮ್ಮ ಬಗ್ಗೆ ಮಾತನಾಡಲು ಇವರಿಗೆ ಅಧಿಕಾರ ಇಲ್ಲ ಎಂದರು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ, ಮಾಜಿ ಶಾಸಕ ಚಂದ್ರಶೇಖರ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ: ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದರೂ ಬಿಜೆಪಿ ನಾಯಕರು ಸುಮ್ಮನಿದ್ದಾರೆ: ಸಿದ್ದರಾಮಯ್ಯ