ಬೆಂಗಳೂರು: ಲೇಖಕ ನಟರಾಜ್ ಹುಳಿಯಾರ್ ಅವರು ಬರೆದಿರುವ 'ಎಲ್ಲರ ಗಾಂಧೀಜಿ' ಪುಸ್ತಕವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸದಲ್ಲಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಟರಾಜ್ ಈ ಪುಸ್ತಕ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕಾರ್ಯಕ್ರಮ ಎಲ್ಲಿ ಮಾಡೊದು ಎಂದು ನಾನು ಅವರಿಗೆ ಕೇಳಿದೆ. ಅವರು ನಮ್ಮ ಮನೆಯಲ್ಲಿ ಮಾಡೋಣ ಎಂದು ಹೇಳಿದ್ದರು. ಎಲ್ಲರ ಗಾಂಧಿ ಪುಸ್ತಕದಲ್ಲಿ ಮಹಾತ್ಮ ಗಾಂಧಿಯವರ ಮಾತುಗಳು ಅಡಗಿವೆ. ಅಧಿಕಾರದಲ್ಲಿ ಇರುವವರು ಗಾಂಧೀಜಿ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.
ಸರ್ಕಾರದ ವಿರುದ್ಧ ಮಾತನಾಡುವುದೇ ಅಪರಾಧ: ಬಿಜೆಪಿ ಸರ್ಕಾರದ ವಿರುದ್ಧ ಮಾತಾಡುವುದು ಒಂದು ಅಪರಾಧವಾಗಿದೆ. ಸ್ವಾತಂತ್ರ್ಯ ಕಿತ್ತುಕೊಳ್ಳಲು ಹೊರಟಿದೆ ಈ ಸರ್ಕಾರ. ಸರ್ಕಾರದ ವಿರುದ್ಧ ಮಾತಾಡಿದರೆ ಜೈಲಿಗೆ ಹಾಕುತ್ತಾರೆ. ಸಂವಿಧಾನಕ್ಕೆ ಬೆಲೆ ಇಲ್ಲದಂತಾಗಿದೆ. ಗಾಂಧೀಜಿ ಅವರನ್ನು ಯಾಕೆ ಕೊಂದು ಹಾಕಿದ್ರು?, ಮಹಾತ್ಮಾ ಗಾಂಧಿ ಕೊಲೆಯಲ್ಲಿ ಶಾಮೀಲಾಗಿದ್ದ ಸಾವರ್ಕರ್ ಫೋಟೋ ನಮ್ಮ ಅಸೆಂಬ್ಲಿಯಲ್ಲಿ ಹಾಕಿದ್ದಾರೆ. ಎಂತಹ ನೀಚರು ಇವರು. ಮನುಷ್ಯತ್ವ ವಿರೋಧಿಗಳು ಒಳ್ಳೆಯ ಸಮಾಜ ಕಟ್ಟಲು ಸಾಧ್ಯ ಇಲ್ಲ ಎಂದು ಕಿಡಿಕಾರಿದರು.
ಮರುಳ ಸಿದ್ದಪ್ಪ ವಾಗ್ದಾಳಿ: ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ಹಿರಿಯ ಸಾಹಿತಿ ಮರುಳ ಸಿದ್ದಪ್ಪ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಮಹಾತ್ಮ ಗಾಂಧಿ ನಿಜವಾದ ರಾಮ ಭಕ್ತ. ರಾಮಜಪ ಮಾಡುವುದರಿಂದ ಕುಷ್ಠರೋಗ ನಿವಾರಣೆ ಆಗುತ್ತದೆ ಅಂತಾ ಗಾಂಧೀಜಿ ಹೇಳಿದ್ದರು. ಈಗಿರುವವರು ಡೋಂಗಿ ರಾಮ ಭಕ್ತರು. ಅವರದ್ದೇ ಬೇರೆ ಸಿದ್ಧಾಂತ. ಬೇರೆ ದಿಕ್ಕಿನಲ್ಲಿ ಹೋಗುತ್ತಾರೆ. ಈ ಸರ್ಕಾರಕ್ಕೆ ಮೂರು ತಿಂಗಳು ಆಯಸ್ಸು ಮಾತ್ರ ಇರೋದು. ಮುಂದೆ ವಿವೇಕ ಇರುವ ಸರ್ಕಾರ ಬರುತ್ತದೆ ಎಂದುಕೊಂಡಿದ್ದೇವೆ. ಆಗ 'ಎಲ್ಲರ ಗಾಂಧೀಜಿ' ಪುಸ್ತಕವನ್ನು ಲಕ್ಷಾಂತರ ಪ್ರತಿಗಳನ್ನ ಹಾಕಿಸಿ. ಕಡಿಮೆ ದರಕ್ಕೆ ಸೇಲ್ ಮಾಡಿ ಎಂದು ಮರುಳ ಸಿದ್ದಪ್ಪ ಮನವಿ ಮಾಡಿದರು.
ಸಿದ್ದರಾಮಯ್ಯ ನಗರ ಸಂಚಾರ: ಪುಸ್ತಕ ಬಿಡುಗಡೆ ಸಮಾರಂಭದ ಬಳಿಕ ಸಿದ್ದರಾಮಯ್ಯ ನಗರದ ವಿವಿಧ ಭಾಗಕ್ಕೆ ಭೇಟಿ ನೀಡಿದರು. ಬೆಂಗಳೂರಿನ ಹಲಸೂರು ಕೆರೆ ಸಮೀಪದಲ್ಲಿರುವ ಕವಿ ತಿರುವಳ್ಳುವರ್ ಅವರ ಪ್ರತಿಮೆಗೆ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿದರು. ಈ ವೇಳೆ ಶಾಸಕ ರಿಜ್ವಾನ್ ಹರ್ಷದ್ ಹಾಜರಿದ್ದರು. ಇದಾದ ಬಳಿಕ ಬೆಂಗಳೂರಿನ ಶಾಂತಿನಗರ ವಿಧಾನಸಭೆ ಕ್ಷೇತ್ರದ ದೊಮ್ಮಲೂರಿನಲ್ಲಿ ಇಂದು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಸಿದ್ದರಾಮಯ್ಯ ಅನಾವರಣಗೊಳಿಸಿದರು. ಬಳಿಕ ಮುಸ್ಲಿಂ ಉದ್ದಿಮೆದಾರರ ಸಮಾವೇಶದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಈ ವೇಳೆ ಹಿರಿಯ ಸಾಹಿತಿ ಮರುಳ ಸಿದ್ದಪ್ಪ, ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್, ಶಾಸಕ ಎನ್.ಎ ಹ್ಯಾರೀಸ್, ಮಾಜಿ ಸಚಿವ ಹೆಚ್.ಎಂ. ರೇವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹಾಜರಿದ್ದರು.
ಗಾಂಧೀಜಿ ಸಾವಿನಲ್ಲಿ ಸಾವರ್ಕರ್ ಕೈವಾಡವಿದೆ: ಸದನದೊಳಗೆ ವೀರ ಸಾವರ್ಕರ್ ಭಾವಚಿತ್ರವನ್ನು ಏಕೆ ಹಾಕಲಾಗುತ್ತದೆ. ಅದರ ಅಗತ್ಯ ಇಲ್ಲ, ಇಲ್ಲಿಯವರೆಗೆ ಸದನದಲ್ಲಿ ಸಾವರ್ಕರ್ ಫೋಟೋ ಹಾಕಿಲ್ಲ, ಈಗ ಏಕೆ? ಎಂದು ಇತ್ತೀಚೆಗೆ ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರು, ಮಹಾತ್ಮ ಗಾಂಧಿ ಹತ್ಯೆಯಲ್ಲಿ ವೀರ ಸಾವರ್ಕರ್ ಕೈವಾಡವಿತ್ತು ಎಂದು ಈ ಮೊದಲು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ಗಾಂಧೀಜಿ ಸಾವಿನಲ್ಲಿ ಸಾವರ್ಕರ್ ಕೈವಾಡವಿದೆ, ಸದನದಲ್ಲಿ ಅವರ ಫೋಟೋ ಅಗತ್ಯವಿಲ್ಲ: ಸಿದ್ದರಾಮಯ್ಯ