ಬೆಂಗಳೂರು: ಸರ್ಕಾರ ಕಾರ್ಮಿಕರ ವಿಚಾರದಲ್ಲಿ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
ಸ್ವಂತ ಊರುಗಳಿಗೆ ಹೋಗುವ ಕಾರ್ಮಿಕರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಉದ್ಯೋಗ ಕಾರ್ಡ್ ಒದಗಿಸಿ, ಕೆಲಸ ನೀಡಬೇಕು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಉದ್ಯೋಗ ಎಂಬ ನಿಯಮ ಸಡಿಲಿಸಬೇಕು. ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ 45 ದಿನಗಳಿಂದ ಸಂಬಳ ಕೊಟ್ಟಿಲ್ಲ. ಕೂಡಲೇ ಅವರಿಗೆ ಭತ್ಯೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲರಿಗೂ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿ, ಅಗತ್ಯವೆನಿಸಿದರೆ ಕ್ವಾರಂಟೈನ್‍ಗೆ ಒಳಪಡಿಸಬೇಕು ಎಂದರು.
35 ಸಾವಿರ ಕೋಟಿ ದೇಣಿಗೆ ಸಂಗ್ರಹ: ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಈವರೆಗೆ ಬಂದಿರುವ ದೇಣಿಗೆ ಎಷ್ಟು ಎಂಬ ಬಗ್ಗೆ ಮಾಹಿತಿಯಿಲ್ಲ. ಪಿಎಂ ಕೇರ್‌ಗೆ ಈವರೆಗೆ 35 ಸಾವಿರ ಕೋಟಿ ದೇಣಿಗೆ ಬಂದಿದೆ. ರೈಲಿನಲ್ಲಿ ಕಾರ್ಮಿಕರನ್ನು ಕಳುಹಿಸಲು 60 ಕೋಟಿ ವೆಚ್ಚವಾಗಬಹುದು. ಇದು ದೊಡ್ಡ ಮೊತ್ತವೇ? ಇಷ್ಟಕ್ಕೂ ಇದೆಲ್ಲಾ ಜನತೆಯ ಹಣ. ಪ್ರಧಾನಿಯವರು ಇಟ್ಟುಕೊಳ್ಳಲು ಕೊಟ್ಟಿರುವುದಲ್ಲ ಎಂದು ಕುಟುಕಿದ್ದಾರೆ.
ಇನ್ನು ಕಾರ್ಮಿಕರ ಪ್ರಯಾಣಕ್ಕೆ 3 ಕೋಟಿ ವೆಚ್ಚ ತಗುಲಬಹುದು. ಅದನ್ನು ಭರಿಸುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲವೇ? ಬಸ್‍ಗಳಿಗೆ ಕಾಯುತ್ತಾ, ಅನ್ನ, ನೀರು ಇಲ್ಲದೆ ಜನರು ಸಂಕಟ ಪಡುತ್ತಿದ್ದಾರೆ. ಅವರಿಗೆ ಮಲಗಲು ಯೋಗ್ಯ ಸ್ಥಳವಿಲ್ಲದೆ ಬಸ್ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಪರದಾಡುತ್ತಿರುವುದನ್ನು ನೋಡಿಯೂ ಸರ್ಕಾರಕ್ಕೆ ಕನಿಕರ ಬರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಅಲೆದಾಡಿಸುವುದು ಸರಿಯಲ್ಲ: ಊರುಗಳಿಗೆ ತೆರಳಲು ನಿರ್ಧರಿಸಿರುವ ಕಾರ್ಮಿಕರನ್ನು ಮೆಜೆಸ್ಟಿಕ್‍ನಿಂದ ಅರಮನೆ ಮೈದಾನಕ್ಕೆ, ಅಲ್ಲಿಂದ ಪೀಣ್ಯಕ್ಕೆ ಹೀಗೆ ಅಲೆದಾಡಿಸಲಾಗುತ್ತಿದೆ. ಲಗೇಜು ಹೊತ್ತು ಮಹಿಳೆಯರು, ಮಕ್ಕಳು ಅಲೆದಾಡುತ್ತಿದ್ದಾರೆ. ಸರ್ಕಾರ ಇವೆಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಸರ್ಕಾರಕ್ಕೆ ಹೃದಯ ಇಲ್ಲವೇ?: ರಾಜ್ಯದ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಸಿಎಸ್‍ಆರ್ ನಿಧಿಯ ಮೂಲಕ ಪಿಎಂ ಕೇರ್‌ಗೆ 1500 ಕೋಟಿ ದೇಣಿಗೆ ನೀಡಿದ್ದಾರೆ. ಆ ಹಣದಲ್ಲಿ ಬಡ ಕಾರ್ಮಿಕರಿಗಾಗಿ ಸ್ವಲ್ಪ ವೆಚ್ಚ ಮಾಡಲು ಇರುವ ಕಷ್ಟವಾದರೂ ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರೈಲಿನ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಪ್ರಯಾಣ ವೆಚ್ಚದಲ್ಲಿ ರಾಜ್ಯದಿಂದ ಪಾಲು ಕೇಳುತ್ತಿದೆ. ಕೇಂದ್ರ ಸರ್ಕಾರ ಕಾರ್ಮಿಕರ ರೈಲ್ವೆ ಪ್ರಯಾಣ ವೆಚ್ಚವನ್ನು ಭರಿಸಬೇಕು. ಹೊರ ದೇಶಗಳಲ್ಲಿರುವವರನ್ನು ಕರೆ ತರಲು ವಿಮಾನದ ವ್ಯವಸ್ಥೆ ಮಾಡುವ ಸರ್ಕಾರಗಳು ಕಾರ್ಮಿಕರ ವಿಚಾರದಲ್ಲಿ ಮೀನಮೇಷ ಎಣಿಸುವುದೇಕೆ ಎಂದು ಕೇಳಿದ್ದಾರೆ.
ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಹೊರಟಿದ್ದ ಕಾರ್ಮಿಕರಿಗೆ ಸರ್ಕಾರ ಬಸ್ ವ್ಯವಸ್ಥೆ ಕಲ್ಪಿಸಿ, ಪ್ರಯಾಣ ದರ ನಿಗದಿ ಮಾಡಿತ್ತು. ಇದರಿಂದ ಕಾರ್ಮಿಕರಿಗೆ ಹೊರೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 1 ಕೋಟಿ ಚೆಕ್ ನೀಡಲು ಮುಂದಾಗಿದ್ದರು. ಆಗ ಎಚ್ಚೆತ್ತ ಸರ್ಕಾರ ನಂತರ ಉಚಿತ ಪ್ರಯಾಣ ಎಂದು ಘೋಷಿಸಿದೆ.
ಕಾರ್ಮಿಕರ ಪ್ರಯಾಣಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾದ ಬಳಿಕ ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ನಿನ್ನೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಕೂಡಾ ಸಲ್ಲಿಸಿದ್ದೆವು. ಲಾಕ್‍ಡೌನ್ ಸಡಿಲಿಕೆ ಬಳಿಕ ಬೇರೆ ಬೇರೆ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರು ಕರ್ನಾಟಕಕ್ಕೆ, ಇಲ್ಲಿರುವ ಕಾರ್ಮಿಕರು ಅವರ ರಾಜ್ಯಗಳಿಗೆ ಹೋಗಲು ಪ್ರಯಾಣ ಬೆಳೆಸಿದ್ದಾರೆ. ಆ ಕಾರ್ಮಿಕರ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರದ ಬಳಿ ಮಾಹಿತಿಯೇ ಇಲ್ಲ. ಲಾಕ್‌ಡೌನ್ ಜಾರಿ ಮತ್ತು ಸಡಿಲಿಕೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇರೆ ಬೇರೆ ಆದೇಶ ಹೊರಡಿಸುತ್ತಿರುವುದರಿಂದ ಜನರಲ್ಲಿ ಗೊಂದಲ ಉಂಟಾಗಿ, ಅರಾಜಕತೆ ಸೃಷ್ಟಿಯಾಗಿದೆ ಎಂದು ಕಿವಿ ಹಿಂಡಿದ್ದಾರೆ.