ಬೆಂಗಳೂರು : ಇಂದು ನಗರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲಾ ಭಾಷೆಗಳ ಅಧ್ಯಾಪಕರ ಸಂಘದವರ ವತಿಯಿಂದ ಆಯೋಜಿಸಲಾಗಿದ್ದ 'ಹೊಸ ಶಿಕ್ಷಣ ನೀತಿ ಭಾರತೀಯ ಭಾಷೆಗಳ ಅಧ್ಯಯನʼ ವಿಷಯದ ಕುರಿತ ವೆಬಿನಾರ್ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಡಿಸಿಎಂ ಅಶ್ವತ್ಥ್ ನಾರಾಯಣ ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡರು, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ ಸದಸ್ಯರಾಗಿದ್ದ ಪ್ರೊ. ಟಿ ವಿ ಕಟ್ಟಿಮನಿ ಹಾಗೂ ಮುಂತಾದವರು ಈ ವೆಬಿನಾರ್‌ನಲ್ಲಿ ಭಾಗಿಯಾಗಿದ್ದರು.
ಇನ್ನು, ಕಾರ್ಯಕ್ರಮದ ನಂತರ ಮಾತನಾಡಿದ ಡಿಸಿಎಂ, 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಉನ್ನತ ಶಿಕ್ಷಣ ವಿಭಾಗದಲ್ಲಿ ಎಂಜಿನಿಯರಿಂಗ್ ಸೇರಿ ಎಲ್ಲ ವೃತ್ತಿಪರ ಕೋರ್ಸುಗಳನ್ನು ಕನ್ನಡದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿ ಕೊಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಎಂಜಿನಿಯರಿಂಗ್ ಕೋರ್ಸುಗಳ ಪಠ್ಯವನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸ ನಡೆದಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಮಾತೃ ಭಾಷೆಗೆ ಅಂದರೆ ನಮ್ಮ ಕನ್ನಡಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ. ಅದರ ಬಗ್ಗೆ ಯಾವ ಗೊಂದಲ, ಅನುಮಾನವೂ ಬೇಡ ಎಂದರು.
ವೃತ್ತಿಪರ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕು ಎಂಬ ಅಂಶವೂ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಹೊಸ ನೀತಿಯ ಪ್ರಮುಖ ಆಶಯವೂ ಇದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕನ್ನಡದಲ್ಲಿಯೇ ವೃತ್ತಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಿದೆ. ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡವನ್ನು ಹೆಚ್ಚೆಚ್ಚು ಅಳವಡಿಸಲಾಗುವುದು ಎಂದು ಹೇಳಿದರು.
ಈ ಕಲಿಕೆಯ ಪರಿಕಲ್ಪನೆ ಅದೆಷ್ಟು ಚೆನ್ನಾಗಿದೆ ಎಂದರೆ, ಹೊಸ ತಂತ್ರಜ್ಞಾನವನ್ನು ತಮ್ಮ ಭಾಷೆಯ ಆಧಾರದ ಮೇಲೆಯೇ ರೂಪಿಸಬಹುದು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡವನ್ನು ಬಳಸಬಹುದು. ತಂತ್ರಜ್ಞಾನ ಮತ್ತು ಆವಿಷ್ಕಾರ ಬೆಳೆದಂತೆಲ್ಲ ಅದಕ್ಕೆ ಸಮಾನಾಂತರವಾಗಿ ಕನ್ನಡವೂ ಬೆಳೆಯಬೇಕು. ಮಾತೃಭಾಷೆಯ ಅಸ್ತಿತ್ವ ಎಲ್ಲ ಕಡೆಯೂ ಇರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಇದನ್ನೂ ಓದಿ : ಎಸ್ಸೆಸ್ಸೆಲ್ಸಿ ಪರೀಕ್ಷಾರ್ಥಿಗಳಿಗೆ ಶುಭ ಕೋರಿದ ಸಿಎಂ ಬಿಎಸ್ವೈ
ಶಿಕ್ಷಣ ನೀತಿಯ ಪ್ರಕಾರ ಮಕ್ಕಳು ಎರಡು ದೇಶಿಯ ಭಾಷೆಗಳನ್ನು ಹಾಗೂ ಒಂದು ಅಂತಾರಾಷ್ಟ್ರೀಯ ಭಾಷೆಯನ್ನು ಕಡ್ಡಾಯವಾಗಿ ಕಲಿಯಲೇಬೇಕು. ಅದರಲ್ಲಿ ಮಾತೃಭಾಷೆಗೆ ಮೊದಲ ಪ್ರಾಶಸ್ತ್ಯ ಇರುತ್ತದೆ. ಮೊದಲು ನಮ್ಮ ಭಾಷೆ, ನಂತರ ಅನ್ಯಭಾಷೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಅಲ್ಲದೆ, ಯಾವುದೇ ಕೋರ್ಸುಗಳನ್ನು ಯಾರೋ ರೂಪಿಸಿ ನಮ್ಮ ಮೇಲೆ ಹೇರುತ್ತಾರೆಂಬ ಅನುಮಾನ ಬೇಡ. ಎಲ್ಲವನ್ನೂ ರೂಪಿಸುವುದು ಆಯಾ ವಿಶ್ವವಿದ್ಯಾಲಯಗಳು ಮತ್ತು ಆಯಾ ವಿಷಯಗಳಲ್ಲಿ ತಜ್ಞರಾಗಿರುವ ನಮ್ಮವರೇ ಪ್ರಾಧ್ಯಾಪಕರು ಎಂದರು.
ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗೂ ಸ್ವಾಯತ್ತತೆ ಕೊಟ್ಟು ಸಬಲೀಕರಣ ಮಾಡಲಾಗುವುದು. ಆಡಳಿತಾತ್ಮಕ, ಶೈಕ್ಷಣಿಕ, ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಎಲ್ಲ ಅಧಿಕಾರಗಳನ್ನು ಕೂಡ ಶಿಕ್ಷಣ ಸಂಸ್ಥೆಗಳಿಗೇ ಕೊಡಲಾಗುವುದು. ಈ ಮೂಲಕ ಶಿಕ್ಷಣ ಸಾಂಸ್ಥಿಕ ನೆಲೆಗಟ್ಟಿನಲ್ಲಿ ಸ್ಥಿರವಾಗಿ ಬೆಳವಣಿಗೆ ಹೊಂದಲಿದೆ ಎಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದರು.