ಬೆಂಗಳೂರು: ಕಾಂಗ್ರೆಸ್ನ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ವಿಳಂಬಕ್ಕೆ ಸಂಖ್ಯಾಬಲದ ಕೊರತೆ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ರಮೇಶ್ ಅವರು ಬಿಜೆಪಿಗೆ ಕರೆತರುತ್ತಿರುವ ಶಾಸಕರ ಸಂಖ್ಯೆ ಕಡಿಮೆಯಾಗಿದೆ ಎನ್ನುವ ಕಾರಣಕ್ಕೆ ಪಕ್ಷದ ಹೈಕಮಾಂಡ್ ಇನ್ನೂ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗ್ತಿದೆ.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಡೋಲಾಯಮಾನ ಸ್ಥಿತಿಗೆ ರಮೇಶ್ ಜಾರಕಿಹೊಳಿ ಸಿಲುಕಿದ್ದಾರೆ. ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮಾನಸಿಕವಾಗಿ ಸಿದ್ಧರಾಗಿರುವ ಅವರು ಬೆಂಬಲಿಗ ಶಾಸಕರ ತಂಡವನ್ನು ಕಟ್ಟುತ್ತಿದ್ದಾರೆ. ಆದರೆ ಅವರು ನಿರೀಕ್ಷಿಸಿದಷ್ಟು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಸಿದ್ಧರಿಲ್ಲ ಎನ್ನುವ ಮಾಹಿತಿ ಕಾಂಗ್ರೆಸ್ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಅಥಣಿಯ ಮಹೇಶ್ ಕುಮಟಳ್ಳಿ, ಕೂಡ್ಲಗಿ ಶಾಸಕ ನಾಗೇಂದ್ರ, ಆನಂದ್ ಸಿಂಗ್, ಬಿ.ಸಿ ಪಾಟೀಲ್, ಡಿ.ಸುಧಾಕರ್ ಹೆಸರುಗಳು ರಮೇಶ್ ಜಾರಕಿಹೊಳಿ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಕೇಳಿಬರುತ್ತಿವೆ. ಆದ್ರೆ ಅವರೆಲ್ಲ ಕಾಂಗ್ರೆಸ್ ಪಕ್ಷ ತೊರೆಯಲು ಸಿದ್ದರಿಲ್ಲ ಎನ್ನಲಾಗಿದೆ. ರೋಷನ್ ಬೇಗ್ ಕೂಡ ಪಕ್ಷದ ನಾಯಕರ ವಿರುದ್ಧ ದನಿ ಎತ್ತಿದ್ದರೂ ಕೈ ಬಿಡುವ ಸೂಚನೆ ಇಲ್ಲ ಎಂದು ಹೇಳಲಾಗ್ತಿದೆ.
ರಮೇಶ್ ಜಾರಕಿಹೊಳಿ ಜೊತೆ 5 ಕ್ಕಿಂತಲೂ ಕಡಿಮೆ ಶಾಸಕರು ಸಂಪರ್ಕದಲ್ಲಿದ್ದು, ಅವರು ಪಕ್ಷ ತೊರೆಯುವ ಮನಸ್ಥಿತಿಯಲ್ಲಿ ಇಲ್ಲ. ಹಾಗಾಗಿಯೇ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಗೆ ಬಿಜೆಪಿ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ತಮ್ಮೊಂದಿಗೆ 10 ಶಾಸಕರಿದ್ದಾರೆ ಎನ್ನುವ ರಮೇಶ್ ಜಾರಕಿಹೊಳಿ ತಮ್ಮ ಬಳಿ ಇರುವ ಸಂಖ್ಯೆಯನ್ನು ಬಿಜೆಪಿ ನಾಯಕರಿಗೆ ತೋರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಮೂಲಗಳಿಂದಲೇ ತಿಳಿದು ಬಂದಿದೆ.
ಈಗಾಗಲೇ ಆಪರೇಷನ್ ಕಮಲಕ್ಕೆ ವಿಫಲ ಯತ್ನ ನಡೆಸಿರುವ ಬಿಜೆಪಿ, ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬಂದರೆ ಅವರು ಗೆಲ್ಲಬಹುದು. ಆದ್ರೆ ಅವರೊಂದಿಗೆ ಕರೆತರುವ ಶಾಸಕರು ಮುಂದೆ ಗೆಲ್ಲುತ್ತಾರಾ ಎನ್ನುವುದು ಬಿಜೆಪಿ ಮುಂದಿರುವ ಪ್ರಶ್ನೆಯಾಗಿದೆ. ಸರ್ಕಾರ ರಚಿಸಿ ನಂತರ ಶಾಸಕರನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲವಾದರೆ ದೊಡ್ಡ ಮುಖಭಂಗವಾಗಲಿದೆ. ಮೈತ್ರಿ ಪಕ್ಷದ ಒಮ್ಮತದ ಅಭ್ಯರ್ಥಿ ಎದುರು ಗೆಲುವು ಸಾಧಿಸಲು ಬರೀ ಬಿಜೆಪಿ ಬೆಂಬಲ ಸಾಲದು. ವೈಯಕ್ತಿಕ ವರ್ಚಸ್ಸೂ ಇರುವ ನಾಯಕರು ಬೇಕು ಎನ್ನುವುದು ಬಿಜೆಪಿ ಲೆಕ್ಕಾಚಾರವಾಗಿದೆಯಂತೆ.
ಬಿಜೆಪಿಯ ಈ ಎಲ್ಲಾ ಲೆಕ್ಕಾಚಾರದ ಪರಿಣಾಮವಾಗಿ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ವಿಳಂಬವಾಗುತ್ತಿದೆ ಎನ್ನುವ ಮಾತುಗಳು ರಾಜ್ಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ಆಪರೇಷನ್ ಕಮಲ ಕಷ್ಟ ಎನ್ನಲಾಗುತ್ತಿದೆ.