ಬೆಂಗಳೂರು: ರಾಜ್ಯದ ರೈತರು, ದಲಿತರು, ಬಡವರು, ಪರಿಶಿಷ್ಟ ಜಾತಿ ಪಂಗಡದವರು ರಾಜ್ಯ ಕಾಂಗ್ರೆಸ್ ಸರ್ಕಾರದ ಆದ್ಯತೆಯಡಿ ಬರುವುದಿಲ್ಲ. ಅವರ ಆದ್ಯತೆ ಕೇವಲ ಅಲ್ಪಸಂಖ್ಯಾತರು ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಬಿಜೆಪಿ ರೈತ ಮೋರ್ಚಾ ವತಿಯಿಂದ ರೈತ ಮೋರ್ಚಾ ನಿಕಟಪೂರ್ವ ಪದಾಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಮಾತನಾಡಿದ ಅವರು, ರಾಜ್ಯದ ರೈತರು ಸಂಕಷ್ಟದಲ್ಲಿದ್ದರೂ ಉಸ್ತುವಾರಿ ಸಚಿವರು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರ ಬಗ್ಗೆ ಕಿಂಚಿತ್ತೂ ಕಳಕಳಿ ಇಲ್ಲ. ಡಿ.ಕೆ.ಶಿವಕುಮಾರ್ರಿಂದ ಶಿವಾನಂದ ಪಾಟೀಲರವರೆಗೆ ಉಡಾಫೆ ಹೇಳಿಕೆಗಳು ರೈತರಿಗೆ ಬೇಸರ ತರಿಸಿವೆ ಎಂದು ಹೇಳಿದರು.
ರೈತರ ಕುರಿತು ಕಿಂಚಿತ್ತೂ ಕಳಕಳಿ ಇಲ್ಲದ ಸಿಎಂ ಇರುವುದು ರಾಜ್ಯದ ದುರಂತವೋ, ರೈತರ ದುರಂತವೋ?. 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ 5 ಲಕ್ಷ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಸಚಿವರು ದುರಹಂಕಾರದ ಹೇಳಿಕೆ ಕೊಡುತ್ತಿದ್ದಾರೆ. ಇನ್ನೊಂದೆಡೆ, ಮುಖ್ಯಮಂತ್ರಿಗಳನ್ನು ದೇವರೇ ಕಾಪಾಡಬೇಕು. ರೈತರನ್ನು ಕಡೆಗಣಿಸಿ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ ಇಡುವ ಮತ್ತು 1 ಸಾವಿರ ಕೋಟಿ ರೂ ಕೂಡಲೇ ಬಿಡುಗಡೆ ಮಾಡುವ ಮಾತು ಮುಖ್ಯಮಂತ್ರಿಗಳದ್ದು ಎಂದು ಟೀಕಿಸಿದರು.
ಇದನ್ನೂ ಓದಿ: ಲೋಕಸಭಾ ಚುನಾವಣೆ ವಿಚಾರ : ಎಂಟಿಬಿ ನಾಗರಾಜ್ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ಕಾಂಗ್ರೆಸ್ಸಿನ ರೈತವಿರೋಧಿ ನೀತಿಯನ್ನು ನೋಡಿ ರೈತ ಮೋರ್ಚಾ ಸುಮ್ಮನಿರಲು ಅಸಾಧ್ಯ. ಕೇಂದ್ರದ ಬಿಜೆಪಿ ಸರ್ಕಾರ, ಹಿಂದಿನ ಬಿಜೆಪಿ ರಾಜ್ಯ ಸರ್ಕಾರದ ಕೊಡುಗೆಯನ್ನು ಜನರಿಗೆ ತಿಳಿ ಹೇಳಬೇಕು. ರೈತರಿಗಾಗಿ ಪ್ರತ್ಯೇಕ ಬಜೆಟ್, ಕೃಷಿ ಪಂಪ್‍ಸೆಟ್‍ಗಳಿಗೆ ಉಚಿತ ವಿದ್ಯುತ್ ಯೋಜನೆ, ಮೋದಿಯವರ ರೈತಪರ ಚಿಂತನೆ, ಯೋಚನೆ, ಯೋಜನೆಗಳನ್ನು ಜನರಿಗೆ ತಿಳಿಸಿ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು.
ಹಿಂದೆ ಬಿಜೆಪಿ ಎಂದರೆ ಬ್ರಾಹ್ಮಣರ ಪಕ್ಷ ಎಂಬ ಮಾತಿತ್ತು. ಅದು ಕ್ರಮೇಣ ಮುಂದುವರಿದ ಜನಾಂಗದವರ ಪಕ್ಷ ಎಂದು ಬದಲಾಯಿತು. ಯಡಿಯೂರಪ್ಪನವರು ಜವಾಬ್ದಾರಿ, ನಾಯಕತ್ವ ತೆಗೆದುಕೊಂಡು ಬಿಜೆಪಿಯನ್ನು ರೈತರ ಪರ ಧ್ವನಿ ಎತ್ತುವ, ರೈತರ ಕಣ್ಣೀರು ಒರೆಸುವ ಪಕ್ಷವಾಗಿ ಬದಲಿಸಿದರು. ಇದಕ್ಕಾಗಿ ಅನೇಕ ಹೋರಾಟ ಮಾಡಿದ್ದರು ಎಂದು ನೆನಪಿಸಿದರು.
ಇದನ್ನೂ ಓದಿ: ಜನವರಿ 22ರಂದು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ; ಸರ್ಕಾರದ ಆದೇಶ ಸ್ವಾಗತಿಸಿದ ಬಿಜೆಪಿ