ಬೆಂಗಳೂರು: ಕೋವಿಡ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಲು ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆ ನಡೆಸಿದ್ದಾರೆ.
ಸುಮಾರು 1,100 ಅಧಿಕಾರಿಗಳೊಂದಿಗೆ ಆನ್ಲೈನ್ ಮೂಲಕ ಸಭೆ ನಡೆಸಿ ನಗರದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪೊಲೀಸರು ಇಲ್ಲಿಯವರೆಗೆ ಅದ್ಭುತ ಕೆಲಸ ಮಾಡಿದ್ದಾರೆ. ಇದೇ ಕೆಲಸ ಮುಂದುವರಿಸಬೇಕು. ಮುಂದಿನ ದಿನಗಳಲ್ಲಿ ಅಂತಾರಾಜ್ಯ ವಲಸೆ ಕಾರ್ಮಿಕರ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಕ್ಷಣದಿಂದ ಅನ್ಯ ರಾಜ್ಯದ ವಲಸೆ ಕಾರ್ಮಿಕರಿಗೆ ಧೈರ್ಯ ತುಂಬಿ. ಅವರಿಗೆ ಎಲ್ಲಿಯೂ ಓಡಾಡದಂತೆ ಇರುವ ಜಾಗದಲ್ಲೆ ಇರುವಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದರು.
ಲಾ ಆ್ಯಂಡ್ ಆರ್ಡರ್ ಸಮಸ್ಯೆ ಅಗದಂತೆ ಸಂದರ್ಭಕ್ಕೆ ತಕ್ಕಂತೆ ಕೆಲಸ ಮಾಡಿ. ಸರ್ಕಾರ ತೀರ್ಮಾನ ತೆಗೆದುಕೊಂಡ ಬಳಿಕ ವಲಸೆ ಕಾರ್ಮಿಕರನ್ನು ಕಳಿಸಲಾಗುತ್ತದೆ. ಈಗ ಕ್ರೈಮ್ ರೇಟ್ ಕಡಿಮೆ ಅಗಿದೆ. ಆದರೆ ಮುಂದಿನ ದಿನದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಕೋವಿಡ್ ನಂತರ ಅದರ ಬಗ್ಗೆ ಗಮನ ಹರಿಸಬೇಕು. ಕ್ಲಿಷ್ಟ ಪರಿಸ್ಥಿತಿಯಲ್ಲಿ ಸಿಬ್ಬಂದಿಗಳು ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಐವತ್ತೈದು ವರ್ಷಕ್ಕೂ ಹೆಚ್ಚಿನ ವಯಸ್ಸಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಂಟೈನ್ಮೆಂಟ್ ಜೋನ್ನಲ್ಲಿ ನಿಯೋಜಿಸಬೇಡಿ ಎಂದು ಆಯಾ ಠಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಪಿಗಳ ಬಂಧನ ನಂತರ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿ. ಲಾಕ್ ಡೌನ್ ನಂತರ ಪೊಲೀಸ್ ಠಾಣೆಯಲ್ಲಿ ಈಗ ಯಾವ ಮಾದರಿಯಲ್ಲಿ ಸೋಶಿಯಲ್ ಡಿಸ್ಟೆನ್ಸ್ ಕಾಪಾಡುತ್ತಿದ್ದೇವೆ ಅದೇ ರೀತಿ ಕೆಲಸ ಮಾಡಬೇಕು. ಮುಂದಿನ ದಿನದಲ್ಲಿ ಠಾಣೆಗೆ ಹೆಚ್ಚಿನ ಜನರು ಬರುತ್ತಾರೆ. ಆ ಸಮಯದಲ್ಲಿ ಸೂಕ್ತ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರು.