ಬೆಂಗಳೂರು: ಯೋಧರೊಬ್ಬರ ಹೆಸರು ಬಳಸಿಕೊಂಡು ಆನ್‌ಲೈನ್ ವಂಚಕರು ಮತ್ತೆ ತಮ್ಮ ಪ್ರವೃತ್ತಿ ಮುಂದುವರೆಸಿದ್ದಾರೆ. ಸದ್ಯ ದೀಪಕ್ ಪವಾರ್ ಎಂಬ ಯೋಧನ ಹೆಸರಿನಲ್ಲಿ ವಂಚಿಸಲು ಸೈಬರ್ ಚೋರರು ಮುಂದಾಗಿರುವ ಪ್ರಸಂಗ ಬೆಳಕಿಗೆ ಬಂದಿದೆ.
ನೋ ಬ್ರೋಕರ್ ಆ್ಯಪ್ನಲ್ಲಿ ಮಹೇಶ್ ರಾಜಗೋಪಾಲ್ ಎಂಬುವವರು 2 ಬಿಹೆಚ್ಕೆ ಮನೆ ಖಾಲಿ ಇದೆ ಎಂದು ಪೋಸ್ಟ್ ಮಾಡಿದ್ದರು. ಇದಕ್ಕೆ ದೀಪಕ್ ಪವಾರ್ ಎಂಬ ಯೋಧನ ಹೆಸರಲ್ಲಿ ಮಹೇಶ್ಗೆ ಸೈಬರ್ ಖದೀಮರು ಮೇಸೆಜ್ ಮಾಡಿ ನಮಗೆ ಬಾಡಿಗೆಗೆ ಮನೆಬೇಕು ಎಂದು ಕೇಳಿದ್ದಾರೆ. ಹೀಗೆ ಮಹೇಶ್ ಹಾಗೂ ಸೈಬರ್ ವಂಚಕರ ನಡುವೆ ಮೆಸೇಜ್ ಮೂಲಕವೇ ಸಂವಹನ ನಡೆದಿದೆ.
ಅತ್ತ ಸೈಬರ್ ವಂಚಕ ತಾನು ಇಂಡಿಯನ್ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿ ಫೋಟೋ, ಆರ್ಮಿಯ ಐಡಿ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ಕಳುಹಿಸಿದ್ದಾನೆ. ನಂತರ ಮನೆ ಬಾಡಿಗೆಗೆ ಬರಲು ಅಡ್ವಾನ್ಸ್ ಕೊಡುವುದಾಗಿ ಹೇಳಿ ಗೂಗಲ್ ಪೇ ಮೂಲಕ ಒಂದು ರೂಪಾಯಿ ಹಣ ಕಳುಹಿಸುವಂತೆ ಮಹೇಶ್ಗೆ ಹೇಳಿದ್ದ. ಇದಕ್ಕೆ ಒಪ್ಪದ ಮನೆ ಮಾಲೀಕ ಮಹೇಶ್, ನೇರವಾಗಿ ಬಂದು ಭೇಟಿಯಾಗಲು ಹೇಳಿದ್ದಾರೆ.
ಇದನ್ನೂ ಓದಿ: ಫೇಸ್ಬುಕ್ ಪ್ರೇಯಸಿಯಿಂದ 40 ಲಕ್ಷ ವಂಚನೆ: ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು
ಆದರೆ, ಇದಕ್ಕೆ ಒಪ್ಪದ ಸೈಬರ್ ವಂಚಕ ನೀವು ಒಂದು ರೂಪಾಯಿ ಗೂಗಲ್ ಪೇ ಮಾಡಿ ಎಂದು ಹತ್ತಾರು ಬಾರಿ ಸತಾಯಿಸಲು ಶುರು ಮಾಡಿದ್ದಾನೆ. ಇದರಿಂದ ಅನುಮಾನಗೊಂಡ ಮನೆ ಮಾಲೀಕ ಮಹೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದಾಗ ಗೂಗಲ್ ಪೇ ಬಳಿಕ ಕ್ಯೂ ಆರ್ ಕೋಡ್ ಕೇಳಿ ಹಣ ಲಪಟಾಯಿಸಲು ಸೈಬರ್ ಖದೀಮರು ಪ್ಲಾನ್ ಮಾಡಿದ್ದರು ಎಂಬುದು ಗೊತ್ತಾಗಿದೆ.
ಈ ಹಿಂದಿನಿಂದಲೂ ಸಹ ಯೋಧನ ಹೆಸರಿನಲ್ಲಿ ಹಣ ಕೇಳುವ ದಂಧೆ ನಗರದಲ್ಲಿ ಹೆಚ್ಚಾಗುತ್ತಿದೆ. ಅನೇಕ ಮಂದಿ ಸೈಬರ್ ಖದೀಮರ ಬಗ್ಗೆ ಅರಿಯದೇ ಯೋಧ ಎಂದು ನಂಬಿ ಲಕ್ಷಾಂತರ ಹಣ ಕಳೆದುಕೊಂಡಿದ್ದರು. ಈ ಹಿನ್ನೆಲೆ ಅಪರಿಚಿತರ ಜೊತೆ ವ್ಯವಹಾರ ಮಾಡುವಾಗ ಜಾಗ್ರತೆ ವಹಿಸಿ ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.