ಬೆಂಗಳೂರು : ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಚಿಸಿರುವ ತಜ್ಞರ ಸಮಿತಿ ಸಮಾಲೋಚನೆ ಪೂರ್ಣಗೊಳಿಸಿದೆ. ಸೋಮವಾರ ವರದಿ ನೀಡಲಿದೆ. ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ನಿಷೇಧಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ತಜ್ಞರ ಸಮಾಲೋಚನೆ ಪೂರ್ಣಗೊಂಡಿದ್ದು, ವರದಿ ಸೋಮವಾರ ಸಿಗಲಿದೆ. ವರದಿ ಪರಿಶೀಲಿಸಿದ ನಂತರವಷ್ಟೇ ಕ್ರಮ ಜರುಗಿಸುವ ಕುರಿತು ನಿರ್ಧರಿಸಬಹುದು ಎಂದು ಪೀಠಕ್ಕೆ ಮಾಹಿತಿ ನೀಡಿದರು.
ಇದೇ ವೇಳೆ ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ ಹಾಗೂ ಪ್ರದೀಪ್ ನಾಯಕ್ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರದ ಕ್ರಮ ಸರಿಯಾದದ್ದಲ್ಲ. ಬಹುತೇಕ ರಾಜ್ಯಗಳಲ್ಲಿ ಆನ್‌ಲೈನ್ ಶಿಕ್ಷಣ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಆನ್‌ಲೈನ್ ಶಿಕ್ಷಣ ಇರಬೇಕೆಂದೇ ಹೇಳಿದೆ. ಕೊರೊನಾ ಒಂದೆರಡು ದಿನದಲ್ಲಿ ಹೋಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡು ಆನ್‌ಲೈನ್ ಶಿಕ್ಷಣ ನಿಷೇಧಿಸಿದ್ದು, ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಸಂವಿಧಾನದ ಆಶಯಗಳ ಉಲ್ಲಂಘನೆ ಎಂದು ಹೊಳ್ಳ ಆರೋಪಿಸಿದರು.
ವಕೀಲ ಪ್ರದೀಪ್ ನಾಯಕ್ ವಾದಿಸಿ, ಸಿಬಿಎಸ್‌ಸಿ ಹಾಗೂ ಐಸಿಎಸ್ಸಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ನೀಡುವುದನ್ನು ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಹಾಗೆಯೇ, ರಾಜ್ಯ ಪಠ್ಯ ಕ್ರಮದ ಶಾಲೆಗಳಿಗೂ ನಿರ್ಬಂಧ ವಿಧಿಸುವ ಅಧಿಕಾರವಿಲ್ಲ ಎಂದು ತಿಳಿಸಿದರು. ವಾದ ಆಲಿಸಿದ ಪೀಠ, ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿತು.