ಬೆಂಗಳೂರು: ಗಗನಕ್ಕೇರಿದ್ದ ಈರುಳ್ಳಿ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಉತ್ತಮ ಗುಣಮಟ್ಟದ್ದ ಈರುಳ್ಳಿ ಸಗಟು ದರದಲ್ಲಿ ಪ್ರತಿ ಕೆಜಿಗೆ ಮಂಗಳವಾರ ಕನಿಷ್ಠ 80 ರಿಂದ 100 ರೂ. ಇತ್ತು. ಇಂದು 75 ರೂಪಾಯಿಯಂತೆ ಮಾರಾಟವಾಗಿದೆ. ಚಿಲ್ಲರೆ ದರ ರೂ. 65 ರಿಂದ ಗರಿಷ್ಠ 75ಕ್ಕೆ ತಲುಪಿದೆ.
ಈ ಕುರಿತು ಮಾತನಾಡಿದ ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯ ಶಂಕರ್, ಈರುಳ್ಳಿ ಹೆಚ್ಚಾಗಿ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಸರಬರಾಜಾಗುತ್ತಿದ್ದು, ಅಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬೆಳೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದಿಂದ ಹಳೆ ಈರುಳ್ಳಿ ಮಾತ್ರ ಪೂರೈಕೆಯಾಗುತ್ತಿದೆ. ಚಿತ್ರದುರ್ಗ, ದಾವಣಗೆರೆ, ಗದಗ, ಹುಬ್ಬಳ್ಳಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹೊಸ ಈರುಳ್ಳಿ ಬರುತ್ತಿದೆ. ಒಟ್ಟು ಈರುಳ್ಳಿಯಲ್ಲಿ ಶೇ 70 ರಷ್ಟು ಪ್ರಮಾಣ ಹಾನಿಯಾಗಿದೆ. ಇದು ರೈತರಿಗೂ ವಿಷಮ ಪರಿಸ್ಥಿತಿಯಾಗಿದೆ.
ಯಶವಂತಪುರ ಎಪಿಎಂಸಿಗೆ ಬುಧವಾರ ಒಟ್ಟು 36,226 ಬ್ಯಾಗ್ ಹಾಗೂ ದಾಸನಪುರ ಎಪಿಎಂಸಿಯ ಉಪ ಪ್ರಾಂಗಣಕ್ಕೆ 1,497 ಬ್ಯಾಗ್ ಈರುಳ್ಳಿ ಬಂದಿದೆ. ಜನವರಿವರೆಗೂ ದರದಲ್ಲಿ ವ್ಯತ್ಯಾಸ ಕಾಣಬಹುದು ಇದರಿಂದ ಗ್ರಾಹಕರಿಗೆ ಹೊರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.