ಬೆಂಗಳೂರು: ಕರುನಾಡಿಗೆ ಕೊರೊನಾ ಕಾಣಿಸಿಕೊಂಡು ಮಾರ್ಚ್ 8ಕ್ಕೆ ಒಂದು ವರ್ಷವಾಗುತ್ತಿದೆ. ಲಕ್ಷಾಂತರ ಜನರನ್ನ ಕಾಡಿದ, ಇಂದಿಗೂ ಕಾಡುತ್ತಿರುವ ನೋವೆಲ್ ಕೊರೊನಾ ವೈರಸ್ ಅಂತಾರಾಷ್ಟ್ರೀಯ ಪ್ರಯಾಣಿಕನಿಂದ ಕಾಣಿಸಿಕೊಂಡಿತ್ತು. ವೈಟ್ ಫೀಲ್ಡ್ ಮೂಲದ 46 ವರ್ಷ ವಯಸ್ಸಿನ ಟೆಕ್ಕಿಯಲ್ಲಿ ಮೊದಲ ಕೊರೊನಾ ವೈರಾಣು ದೃಢಪಟ್ಟಿತ್ತು. ಯುಎಸ್ಎಯಿಂದ ದುಬೈ ಮೂಲಕ ಪ್ರಯಾಣ ಮಾಡಿ ಬಂದಿದ್ದ ಬೆಂಗಳೂರು ಟೆಕ್ಕಿಯನ್ನು ಚಿಕಿತ್ಸೆಗಾಗಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ನಲ್ಲಿ ದಾಖಲು ಮಾಡಲಾಗಿತ್ತು.
ಇತ್ತ ಕೊರೊನಾ ವೇಗವಾಗಿ ಹರಡುವ ರೀತಿಗೆ ಸಂಪರ್ಕದಲ್ಲಿದ್ದ ಟೆಕ್ಕಿಯ ಪತ್ನಿಗೂ ಮಾರ್ಚ್ 10 ರಂದು ಸೋಂಕು ತಗುಲಿತ್ತು. ಬಳಿಕ ಅಂದೇ ಈ ದಂಪತಿಗಳ 13 ವರ್ಷದ ಪುತ್ರಿಗೂ ಸೋಂಕು ಕಂಡು ಬಂದಿತ್ತು. ಇನ್ನು ಈ ಮೊದಲ ಸೋಂಕಿತನ ಸಂಪರ್ಕದಲ್ಲಿ ಬರೋಬ್ಬರಿ 2,666 ಜನರು ಇದ್ದು ಅವರನ್ನು ಪತ್ತೆ ಮಾಡಲಾಗಿತ್ತು.
ರಾಜ್ಯದ ಎಲ್ಲ ಎಲ್‌ಕೆಜಿ-ಯುಕೆಜಿ ತರಗತಿಗಳು ನಡೆಸದಂತೆ ಆದೇಶ:
2020ರ ಮಾರ್ಚ್ 8 ರಂದು ಮೊದಲ ಪ್ರಕರಣ ಬೆಂಗಳೂರಿನಲ್ಲಿ ಕಾಣಿಸಿಕೊಂಡ ತಕ್ಷಣವೇ, ಎಚ್ಚೆತ್ತು ಶಿಕ್ಷಣ ಇಲಾಖೆಯು ರಾಜ್ಯಾದ್ಯಂತ ಎಲ್ಲ ಎಲ್‌ಕೆಜಿ, ಯುಕೆಜಿ ನರ್ಸರಿ ವಿಭಾಗಗಳನ್ನು ಮುಚ್ಚುವಂತೆ ಸೂಚಿಸಿತ್ತು. ಸರ್ಕಾರದ ಆದೇಶದವರೆಗೆ ಶಾಲಾರಾಂಭ ಮಾಡದಂತೆ ತುರ್ತು ರಜೆ ಘೋಷಿಸಿತ್ತು. ಈಗ ಒಂದು ವರ್ಷವಾದರೂ ಇಂದಿಗೂ ಆ ತರಗತಿಗಳ ಪುನಾರಂಭಕ್ಕೆ ಕೋವಿಡ್ ಅಡ್ಡಗಾಲು ಹಾಕಿದೆ. ಹೀಗಾಗಿ, ಎಲ್ಲ ಅನುದಾನಿತ ಹಾಗೂ ಖಾಸಗಿ ಶಾಲೆಗಳು ಆನ್‌ಲೈನ್ ಮೂಲಕವೇ ಪಾಠ ಪ್ರವಚನ ನಡೆಸುತ್ತಿವೆ. ಹಾಗೆ ಮರುದಿನವೇ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೂ ರಜೆಯನ್ನ ನೀಡಲಾಯ್ತು.
ಓದಿ:ರಾಜ್ಯದಲ್ಲಿಂದು 622 ಮಂದಿಯಲ್ಲಿ ಸೋಂಕು ಪತ್ತೆ: 3 ಜನ ಕೋವಿಡ್ಗೆ ಬಲಿ
ಹೀಗೆ, ಅಂದು ಕಾಣಿಸಿಕೊಂಡ ಕೊರೊನಾ ವೈರಸ್ ವಿರುದ್ಧ ಇಂದಿಗೂ ಜನರು ಘರ್ಷಣೆ ನಡೆಸುತ್ತಲೇ ಇದ್ದಾರೆ. ಒಂದಂಕಿಯಿಂದ ಶುರುವಾದ ಸೋಂಕಿತರ ಸಂಖ್ಯೆಯು ಸಾವಿರ ಗಡಿದಾಟಿದ್ದು ಇದೆ. ಆ ಮೂಲಕ ಒಟ್ಟಾರೆ ರಾಜ್ಯದಲ್ಲಿ 9,55,015 ಮಂದಿ ಸೋಂಕು ತಗುಲಿಸಿಕೊಂಡಿದ್ದಾರೆ. ಇದರಲ್ಲಿ ಕೊರೊನಾ ನಿರ್ಲಕ್ಷ್ಯಕ್ಕೆ, ತಡವಾಗಿ ಚಿಕಿತ್ಸೆ ಸಿಕ್ಕಿದ್ದಕ್ಕೆ, ಕೊರೊನಾ ಬಂದಿದ್ದೇ ತಿಳಿಯದೇ ಬಲಿಯಾದವರು ಇದ್ದು, 12,362 ಸೋಂಕಿತರು ಮೃತಪಟ್ಟರು.. ಸದ್ಯ 9,35,772 ಜನರು ಸೋಂಕಿನ ವಿರುದ್ಧ ಹೋರಾಡಿ ಗೆದಿದ್ದರೆ, ಇತ್ತ 6862 ಜನರು ಸೋಂಕಿನ ಚಿಕಿತ್ಸೆ ಪಡೆಯುತ್ತಿದ್ದಾರೆ.. ಚೀನಾದ ವುಹಾನ್ನಲ್ಲಿ ಕಾಣಿಸಿಕೊಂಡ ಈ ಕೊರೊನಾ ಸೋಂಕು ಇಡೀ ಪ್ರಪಂಚವನ್ನೇ ಕಾಡಿದ್ದು ಸುಳ್ಳಲ್ಲ.
ಇದೀಗ ಕೊರೊನಾ ಮೊದಲ ಅಲೆಯನ್ನ ಸಮರ್ಥವಾಗಿ ಎದುರಿಸಿರುವ ನಾವು ಎರಡನೇ ಅಲೆ ಬರದಂತೆ ಮಾರ್ಗಸೂಚಿಯನ್ನ ಪಾಲನೆ ಮಾಡಬೇಕಿದೆ. ಒಂದು ರೂಪದ ಕೊರೊನಾಗೆ ಕುಸಿದಿರುವ ನಾವುಗಳು ಹೊಸ ಸ್ವರೂಪದ ರೂಪಾಂತರಿ ಕೊರೊನಾವೂ ಎದುರಾಗುತ್ತಿದೆ. ಒಬ್ಬರ ನಿರ್ಲಕ್ಷ್ಯವೂ ಲಕ್ಷಾಂತರ ಜನರ ಸಾವು ನೋವಿಗೆ ಕಾರಣವಾಗಿ ಇರಲಿದೆ. ಹೀಗಾಗಿ, ನಮ್ಮ ಆರೋಗ್ಯದ ಜೊತೆ ಜೊತೆಗೆ ನಮ್ಮವರ ಆರೋಗ್ಯ ಕಾಪಾಡಿಕೊಂಡು ಪ್ರತಿಯೊಬ್ಬರು ವಾರಿಯರ್ಸ್ ಆಗಿ, ಕೊರೊನಾವನ್ನ ಬಗ್ಗು ಬಡಿಯುವ ಕೆಲಸ ಮಾಡಬೇಕಿದೆ.