ಬೆಂಗಳೂರು: ಮೈತ್ರಿ ಸರ್ಕಾರವನ್ನು ಕೆಡವಿದ ಅತೃಪ್ತರಿಂದ ಅಧಿಕಾರದ ಚುಕ್ಕಾಣಿ ಹಿಡಿದ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೀಗ ಒಂದು ವರ್ಷದ ಹೊಸ್ತಿಲಲ್ಲಿ ಇದೆ. ಒಂದು ವರ್ಷ ಪೂರೈಸಲಿರುವ ಬಿಜೆಪಿ ಸರ್ಕಾರ ತನ್ನ ವರ್ಷದ ಆಡಳಿತಾವಧಿಯಲ್ಲಿ ಹಲವು ವಿವಾದಗಳಿಗೂ ಗ್ರಾಸವಾಗಿತ್ತು.
ಯಡಿಯೂರಪ್ಪ ನೇತೃತ್ವದ ಸರ್ಕಾರ ರಾಜ್ಯದ ಅಧಿಕಾರ ಹಿಡಿದು ಒಂದು ವರ್ಷ ಸಮಿಪಿಸುತ್ತಿದೆ. ಜುಲೈ 26ಕ್ಕೆ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಲಿದೆ. ಕ್ಷಿಪ್ರ ರಾಜಕೀಯ ಕ್ರಾಂತಿಯಿಂದ ಮೈತ್ರಿ ಸರ್ಕಾರ ಪತನವಾಗಿ, ಬಿ.ಎಸ್.ಯಡಿಯೂರಪ್ಪ ಸರ್ಕಾರ ಅಸ್ವಿತ್ವಕ್ಕೆ ಬಂದಿತು. ಇದೀಗ ಬಿಜೆಪಿ ಸರ್ಕಾರ ರಾಜ್ಯದ ಚುಕ್ಕಾಣಿ ಹಿಡಿದು ಒಂದು ವರ್ಷ ಪೂರೈಸುತ್ತಿದೆ. ಒಂದು ವರ್ಷದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ ಬಿಜೆಪಿ ಸರ್ಕಾರ ತನ್ನ ಆಡಳಿತದಲ್ಲಿ ಕೆಲ ವಿವಾದಾತ್ಮಕ ತೀರ್ಮಾನಗಳನ್ನು ಕೈಗೊಂಡಿವೆ.
ಟಿಪ್ಪು ಜಯಂತಿ ರದ್ದು:
ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದ ಹಾಗೇ ತಾನು ಮೊದಲಿನಿಂದ ವಿರೋಧಿಸುತ್ತಲೇ ಬರುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದು ಪಡಿಸಿತು. ಆ ಮೂಲಕ ಬಿಜೆಪಿ ಸರ್ಕಾರ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಿವಾದಾತ್ಮಕ ಟಿಪ್ಪು ಜಯಂತಿಯನ್ನು ಜಾರಿಗೆ ತರಲಾಗಿತ್ತು. ಇದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದ ಹಾಗೆಯೇ ಟಿಪ್ಪು ಜಯಂತಿ ರದ್ದು ಮಾಡಿ ಆದೇಶ ಹೊರಡಿಸಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ನಿರ್ಧಾರದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೋಮು ದ್ವೇಷದಲ್ಲಿ ಬಿಜೆಪಿ ಸರ್ಕಾರ ಟಿಪ್ಟು ಜಯಂತಿಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿದ್ದರು.
ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ:
ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ತಂದಿರುವುದು ಸಾಕಷ್ಟು ವಿರೋಧ, ವಿವಾದ ಸೃಷ್ಟಿಸಿದೆ. ಸುಗ್ರೀವಾಜ್ಞೆ ಮೂಲಕ 63 ಎ, 79 ಎ ಹಾಗೂ ಬಿ ಸೆಕ್ಷನ್ ಗೆ ಸರ್ಕಾರ ತಿದ್ದುಪಡಿ ತಂದಿದ್ದು, ಅದರಂತೆ ರೈತ ಹಿನ್ನೆಲೆ ಇಲ್ಲದವರೂ ಹಾಗೂ ನಿರ್ದಿಷ್ಟ ಆದಾಯಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಕೃಷಿ ಜಮೀನು ಖರೀದಿಸಬಹುದು. ಕೃಷಿ ಮಾಡಲು ಉದ್ದೇಶಿಸುವವರು ರಾಜ್ಯದಲ್ಲಿಯೇ ಭೂಮಿ ಖರೀದಿಸಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂಬುದು ಸರ್ಕಾರದ ವಾದವಾಗಿದೆ. ಆದರೆ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ರೈತರು, ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಈ ಭೂ ಸುಧಾರಣೆ ಕಾಯ್ದೆ ಮೂಲಕ ರಿಯಲ್ ಎಸ್ಟೇಟ್, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗಲು ಈ ಕಾಯ್ದೆ ತರಲಾಗಿದೆ. ಇದು ಗಣಿ ಅಕ್ರಮಗಿಂತಲೂ ದೊಡ್ಡ ಹಗರಣ ಎಂದು ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಭೂ ಸುಧಾರಣೆಗಳ ನಿಯಮ 109 ರ ಅಡಿ ಕೈಗಾರಿಕೆ ಸ್ಥಾಪಿಸಿ ಏಳು ವರ್ಷಗಳ ಬಳಿಕ ಅರ್ಥಿಕ ಮುಗ್ಗಟ್ಟಿನಿಂದ ನಿಭಾಯಿಸಲು ಸಾಧ್ಯವಾಗದಿದ್ದರೆ, ಮಾರಾಟ ಮಾಡಲು ಅವಕಾಶ ನೀಡುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾನೂನು ಜಾರಿಗೊಳಿಸಿರುವುದು ರೈತರು, ಪ್ರತಿಪಕ್ಷಗಳ ವಿರೋಧಕ್ಕೆ ಕಾರಣವಾಗಿತ್ತು. ಈ ತಿದ್ದುಪಡಿ ಪ್ರಕಾರ ಕೈಗಾರಿಕೋದ್ಯಮಿಗಳು ರೈತರಿಂದ ಖರೀದಿಸಿದ ಕೃಷಿ ಭೂಮಿಯಲ್ಲಿ ಏಳು ವರ್ಷಗಳಲ್ಲಿ ಉದ್ದೇಶಿತ ಕೈಗಾರಿಕೆ ಆರಂಭಿಸಲು ಇಲ್ಲವೇ ಆರಂಭಿಸಿದರೂ ಮುನ್ನಡೆಸಲು ಸಾಧ್ಯವಾಗದಿದ್ದರೆ ಆ ಭೂಮಿಯನ್ನು ಅದೇ ಉದ್ದೇಶಕ್ಕೆ ಮತ್ತೂಬ್ಬರಿಗೆ ಮಾರಾಟ ಮಾಡಬಹುದಾಗಿದೆ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದು ರಾಜ್ಯ ಸರ್ಕಾರದ ಮತ್ತೊಂದು ವಿವಾದಾತ್ಮಕ ತೀರ್ಮಾನ. ಎಪಿಎಂಸಿ ಕಾಯ್ದೆಯ 2 ಸೆಕ್ಷನ್‌ಗಳಿಗೆ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿದೆ. ಅದರಂತೆ ರೈತರು ಯಾವುದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಅಧೀನಕ್ಕೆ ಒಳಪಡುವುದಿಲ್ಲ. ರೈತರು ತಮ್ಮಿಷ್ಟದಂತೆ ಯಾರಿಗೆ ಬೇಕಾದರೂ ಬೆಳೆ ಮಾರಾಟ ಮಾಡಬಹುದು. ಹಾಗೆಯೇ ಖಾಸಗಿಯವರು ರೈತರಿಂದ ನೇರವಾಗಿ ಬೆಳೆ ಖರೀದಿಸಬಹುದಾಗಿದೆ. ಈ ತಿದ್ದುಪಡಿ ಕಾಯ್ದೆಗೆ ರೈತರು ಹಾಗೂ ಪ್ರತಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಎಪಿಎಂಸಿ ಕಾಯ್ದೆಯ ಕಲಂಗಳಿಗೆ ತಿದ್ದುಪಡಿ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ಸಂಪೂರ್ಣ ಕಾರ್ಪೋರೇಟ್ ಕೈಗೆ ಸಿಲುಕಿ, ರೈತರ ಶೋಷಣೆ ಮಿತಿ ಮೀರಲಿದೆ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ಮೇಲ್ಸೇತುವೆಗೆ ವೀರ ಸಾವರ್ಕರ್ ನಾಮಕರಣ:
ಯಲಹಂಕ ಮೇಲ್ಸೇತುವೆ ವೀರ ಸಾವರ್ಕರ್ ನಾಮಕರಣ ತೀವ್ರ ವಿವಾದಕ್ಕೆ ಕಾರಣವಾಗಿದ್ದ, ಬಿಜೆಪಿ ಸರ್ಕಾರದ ಮತ್ತೊಂದು ನಿರ್ಧಾರ. ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರು ನಾಮಕರಣ ಮಾಡುವ ಬಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿಯೂ ಕೂಡಾ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ಸರ್ಕಾರ ಕೊರೊನಾ ಹಿನ್ನೆಲೆ ನಾಮಕರಣ ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿತ್ತು.
ಲಾಕ್‌ಡೌನ್ ವೇಳೆ ಶ್ರಮಿಕ್ ರೈಲು ರದ್ದು:
ಲಾಕ್‌ಡೌನ್ ವೇಳೆ ವಲಸಿಗರನ್ನು ಅವರ ಊರುಗಳಿಗೆ ಕಳುಹಿಸುವುದಕ್ಕಾಗಿ ಇದ್ದ ಶ್ರಮಿಕ್ ರೈಲನ್ನು ರದ್ದು ಮಾಡಿದ ಸರ್ಕಾರದ ನಿರ್ಧಾರ ಭಾರೀ ವಿವಾದಕ್ಕೆ ಕಾರಣವಾಗಿತ್ತು. ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳುಹಿಸಲು ಕರ್ನಾಟಕ ಸರ್ಕಾರ ರೈಲುಗಳಿಗಾಗಿ ಬೇಡಿಕೆ ಇಟ್ಟಿತ್ತು. ಬಳಿಕ ರೈಲುಗಳ ಅವಶ್ಯಕತೆ ಇಲ್ಲ ಎಂದು ರೈಲ್ವೆ ಇಲಾಖೆಗೆ ಪತ್ರ ಬರೆದಿತ್ತು. ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ವಲಸೆ ಕಾರ್ಮಿಕರು ರೈಲು ಸೇವೆ ಇಲ್ಲದೇ ಕಾಲ್ನಡಿಗೆಯಲ್ಲೇ ತಮ್ಮ ರಾಜ್ಯಗಳಿಗೆ ತೆರಳಿದ್ದರು. ಸರ್ಕಾರದ ಈ ನಿರ್ಧಾರಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ವಿವಾದ ಹೆಚ್ಚಾಗುತ್ತಿದ್ದ ಹಾಗೆ ಸರ್ಕಾರ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.
ಕೆಲಸದ ಅವಧಿ ಹೆಚ್ಚಳಕ್ಕೆ ತೀರ್ಮಾನ:
ರಾಜ್ಯ ಸರಕಾರ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು 9 ತಾಸುಗಳಿಂದ 10 ಗಂಟೆಗಳಿಗೆ ಹೆಚ್ಚಳ ಮಾಡಿ ಮೇ 22ರಂದು ಅಧಿಸೂಚನೆ ಹೊರಡಿಸಿರುವುದು ಕಾರ್ಮಿಕ ವಲಯದಿಂದ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಕೊರೊನಾ ಬಿಕ್ಕಟ್ಟನ್ನು ಸಾರ್ವಜನಿಕ ತುರ್ತು ಪರಿಸ್ಥಿತಿಯಾಗಿ ಪರಿಗಣಿಸಿ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿ ಕೈಗಾರಿಕೆಗಳ ಕಾಯ್ದೆಯ ಸೆಕ್ಷನ್ 5ರಡಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಒಪ್ಪದ ಹೈಕೋರ್ಟ್, ಅಧಿಸೂಚನೆ ವಾಪಸ್ ಪಡೆಯದಿದ್ದರೆ ತಡೆ ನೀಡುವುದಾಗಿ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ತಕ್ಷಣವೇ ಅಧಿಸೂಚನೆಯನ್ನು ಹಿಂಪಡೆಯಿತು.