ಬೆಂಗಳೂರು: ಮುಖ್ಯಮಂತ್ರಿಗಳ ಮನೆ ಭದ್ರತೆಗೆ ನಿಯೋಜಿತರಾಗಿದ್ದ ಸಂದರ್ಭದಲ್ಲಿ ಗಾಂಜಾ ದಂಧೆಯಲ್ಲಿ ತೊಡಗಿದ್ದ ಪ್ರಕರಣ ಸಂಬಂಧ ಅಮಾನತುಗೊಂಡಿರುವ ಇಬ್ಬರು ಕಾನ್‌ಸ್ಟೇಬಲ್‌ಗಳ ಮೇಲೆ ಈ ಹಿಂದೆ ಗಾಂಜಾ ವ್ಯಸನಿಗೆ 1 ಲಕ್ಷ ರೂ.ಗೆ ಬೇಡಿಕೆಯಿಟ್ಟ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್ ಹಾಗೂ ಸಂತೋಷ್ ಅಮಾನತಾಗಿದ್ದಾರೆ. ಆಡುಗೋಡಿ ನಿವಾಸಿ ಆಟೋ ಚಾಲಕ ಇಲಿಯಾಸ್ ಎಂಬಾತ 2021ರ ಅ.25ರಂದು ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಸ್ನೇಹಿತ ಸೈಯದ್ ಜೊತೆ ಗಾಂಜಾ ಸೇವನೆ ಮಾಡುತ್ತಿದ್ದ. ಆ ವೇಳೆ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್ ಮತ್ತು ಸಂತೋಷ್ ದಾಳಿ ನಡೆಸಿ ಈ ಇಬ್ಬರನ್ನು ಹಿಡಿದು, ಗಾಂಜಾ ತುಂಬಿದ್ದ ಸಿಗರೇಟ್ ವಶಕ್ಕೆ ಪಡೆದಿದ್ದರು.
ಅಲ್ಲದೆ, 1 ಲಕ್ಷ ರೂಪಾಯಿ ಕೊಟ್ಟರೆ ಪ್ರಕರಣ ದಾಖಲಿಸದೇ ಬಿಟ್ಟು ಕಳುಹಿಸುವುದಾಗಿ ಹೇಳಿದ್ದರು. ಹೆದರಿದ ಆಟೋ ಚಾಲಕ ಇಲಿಯಾಸ್, ನನ್ನ ಬಳಿ ಅಷ್ಟೊಂದು ಹಣ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದಾಗ, ಕಾನ್‌ಸ್ಟೇಬಲ್‌ಗಳು ಆತನ ಬಳಿಯಿದ್ದ 5 ಸಾವಿರ ರೂ. ಕಿತ್ತುಕೊಂಡು ಇಬ್ಬರನ್ನೂ ಬಿಟ್ಟು ಕಳುಹಿಸಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಭಯದಿಂದ ದೂರು ನೀಡಿರಲಿಲ್ಲ: ಪೊಲೀಸರಾಗಿದ್ದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿ ತೊಂದರೆ ನೀಡಬಹುದು ಎಂದು ಆತಂಕಗೊಂಡು ಈ ಕುರಿತು ದೂರು ನೀಡಿರಲಿಲ್ಲ. ಇದೀಗ ಇಬ್ಬರೂ ಗಾಂಜಾ ದಂಧೆಯಲ್ಲಿ ತೊಡಗಿರುವ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬಂದಿರುವುದನ್ನು ನೋಡಿರುವೆ. ಹೀಗಾಗಿ ಇದೀಗ ಧೈರ್ಯ ಮಾಡಿ, ನನ್ನಿಂದ 5 ಸಾವಿರ ರೂ. ಕಿತ್ತುಕೊಂಡಿರುವ ಕುರಿತಂತೆ ಈ ಇಬ್ಬರು ಕಾನ್‌ಸ್ಟೇಬಲ್‌ಗಳ ವಿರುದ್ಧ ದೂರು ನೀಡುತ್ತಿರುವುದಾಗಿ ಇಲಿಯಾಸ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಒಂದು ಎಕರೆ ಜಮೀನಿನಲ್ಲಿ 19 ವಿದ್ಯುತ್ ಕಂಬ.. ರೈತನ ಬದುಕಿಗೆ ಕೊಳ್ಳಿ ಇಟ್ಟಿತು ಅಧಿಕಾರಿಗಳ ನಿರ್ಲಕ್ಷ್ಯ..!