ಬೆಂಗಳೂರು: ಬಿಬಿಎಂಪಿ 12 ಸ್ಥಾಯಿ ಸಮಿತಿಗಳ ಚುನಾವಣೆಗೆ ಜ.18ರಂದು ದಿನಾಂಕ ನಿಗದಿಯಾಗಿದೆ. ಆದರೆ ಇನ್ನೂ ಸ್ಥಾಯಿ ಸಮಿತಿಗಳ 11 ಸದಸ್ಯರು, ಅಧ್ಯಕ್ಷರು ಯಾರಾಗ್ತಾರೆ ಎಂಬುದು ಅಂತಿಮಗೊಂಡಿಲ್ಲ.
ಮೂರು ಬಾರಿ ಮುಂದೂಡಲ್ಪಟ್ಟಿರುವ ಈ ಚುನಾವಣೆ ಈ ಬಾರಿ ನಡೆದೇ ನಡೆಯುತ್ತೆ ಎಂದು ಮೇಯರ್ ಗೌತಮ್ ಕುಮಾರ್, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಹಾಗೂ ವಿಪಕ್ಷ ನಾಯಕ ವಾಜಿದ್ ತಿಳಿಸಿದ್ದಾರೆ. ಇನ್ನು ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾಳೆ ಮೂರೂ ಪಕ್ಷಗಳು ಸಭೆ ಕರೆದಿವೆ.
ಮೂಲ ಬಿಜೆಪಿಗರು ಹಾಗೂ, ಬಿಜೆಪಿ ಅಧಿಕಾರಕ್ಕೆ ಬರಲು ಪಕ್ಷಾಂತರ ಮಾಡಿರುವ ಸದಸ್ಯರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿಯಲಿದೆ ಎಂಬ ಮಾತುಗಳು ಪಾಲಿಕೆ ವಲಯದಲ್ಲಿ ಕೇಳಿಬರುತ್ತಿವೆ.
ಪಕ್ಷವಿರೋಧಿ ಪಾಲಿಕೆ ಸದಸ್ಯರಿಗೆ ಪ್ರತ್ಯೇಕ ಕೂರಿಸುವಂತೆ ವಿಪಕ್ಷದ ಮನವಿ:
ಪಕ್ಷವಿರೋಧಿ ಚಟುವಟಿಕೆ ಮಾಡಿ ಉಚ್ಛಾಟನೆಗೊಂಡಿರುವ ಕಾಂಗ್ರೆಸ್ನ 14 ಪಾಲಿಕೆ ಸದಸ್ಯರಿಗೆ ಚುನಾವಣೆಯಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡುವಂತೆ ವಿಪಕ್ಷ ನಾಯಕ ಅಬ್ದುಲ್ ವಾಜಿದ್, ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ಗೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಸದಸ್ಯರು ಕೂರುವ ಜಾಗದಲ್ಲಿ ಕುಳಿತು ಬಿಜೆಪಿ ಪರ ಮಾತನಾಡುವ ಸದಸ್ಯರಿಂದ, ಮುಜುಗರ ತಪ್ಪಿಸಲು, ಈ ರೀತಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್- ಜೆಡಿಎಸ್ ಪಕ್ಷಗಳಿಂದ ಬಿಜೆಪಿಗೆ ಜಿಗಿದ ಕಾರ್ಪೋರೇಟರ್ಸ್ಗಳಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ. ಮೂಲ ಬಿಜೆಪಿಗರು ಹಾಗೂ ಬಿಜೆಪಿಗೆ ಬೆಂಬಲಿಸಿದ ಪಾಲಿಕೆ ಸದಸ್ಯರಿಗೆ ಸ್ಥಾನ ನೀಡುವ ಬಗ್ಗೆ ಮುನೀಂದ್ರ ಕುಮಾರ್ ಸಹ ಸ್ಪಷ್ಟಪಡಿಸಿದ್ದಾರೆ. ಅದರಂತೆ ದೇವದಾಸ್, ಮಂಜುಳ, ನಾರಾಯಣಸ್ವಾಮಿ, ರಾಜಣ್ಣ, ಚಂದ್ರಪ್ಪ ರೆಡ್ಡಿ, ಮಮತ ವಾಸುದೇವ್, ರಮೇಶ್, ನಾಗರತ್ನ, ರಾಮಮೂರ್ತಿ, ಸರಳ ಮಹೇಶ್, ಶಶಿಕಲಾ, ಸಂಗಾತಿ ವೆಂಕಟೇಶ್ ಸ್ಥಾಯಿ ಸಮಿತಿ ಚುನಾವಣೆ ರೇಸ್ ನಲ್ಲಿದ್ದಾರೆ. ನಾಳೆ ಬಿಜೆಪಿ ನಡೆಸಲಿರುವ ಸಭೆಯಲ್ಲಿ ಅಭ್ಯರ್ಥಿಗಳು ಅಂತಿಮವಾಗಿ ಆಯ್ಕೆಯಾಗಲಿದ್ದಾರೆ.