ಬೆಂಗಳೂರು: ಓಹೋ ವಿಶ್ವನಾಥ್ ಈಗ ನಿಮ್ಮ ಪರವಿದ್ದಾರಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾರ ತೆಗೆದ ಘಟನೆ ವಿಧಾನ ಪರಿಷತ್ನಲ್ಲಿ ನಡೆಯಿತು. ಬಿಜೆಪಿ ಸದಸ್ಯರಾಗಿ ಕಾಂಗ್ರೆಸ್ ಸದಸ್ಯರ ಮೂಲಕ ಪ್ರಶ್ನೆ ಕೇಳಿಸಿದ್ದಕ್ಕೆ ಸಿಎಂ ಅವರಿಂದ ಈ ರೀತಿಯ ಉದ್ಘಾರ ಬಂದಿತು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪತ್ರಿಕಾ ಜಾಹೀರಾತು ಕುರಿತು ಬಿಜೆಪಿ ಸದಸ್ಯ ಎಚ್.ವಿಶ್ಚನಾಥ್ ಚುಕ್ಕೆ ಗುರುತಿನ ಪ್ರಶ್ನೆಯನ್ನು ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ ಕೇಳಿದರು. ಇದಕ್ಕೆ ಪ್ರತಿಯಾಗಿ ಸಿಎಂ ಓಹೋ ವಿಶ್ವನಾಥ್ ನಿಮ್ಮ ಪರನಾ ಎನ್ನುತ್ತಾ ಉದ್ಘಾರ ತೆಗೆದರು.
ಮುದ್ರಣ ಮಾಧ್ಯಮಕ್ಕೆ ಹೆಚ್ಚು ಅನುದಾನ ಕೊಡಿ: ನಂತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಮುದ್ರಣ ಮಾಧ್ಯಮಕ್ಕೆ ಹೆಚ್ಚು ಅನುದಾನ ಕೊಡಿ ಎಂದಿದ್ದಾರೆ. ನಾವು ಬೇಧ, ಭಾವ ಮಾಡಲು ಸಾಧ್ಯವಿಲ್ಲ. ನಾವು ಮುದ್ರಮಣ ಮಾಧ್ಯಮಕ್ಕೇ ಹೆಚ್ಚು ಅನುದಾನ ಕೊಡುತ್ತಿದ್ದೇವೆ. ಎಲ್ಲ ಸರ್ಕಾರಗಳೂ ಕೂಡ ಮುದ್ರಣಕ್ಕೆ ಹೆಚ್ಚಿನ ಅನುದಾನ ನೀಡುತ್ತ ಬಂದಿವೆ. ಈ ವರ್ಷವೂ ಮುದ್ರಣ ಮಾಧ್ಯಮಕ್ಕೆ ಒತ್ತು ನೀಡಲಾಗಿದೆ. ಸುಧಾರಣೆಗೆ ಏನೇನು ಬೇಕೋ ಅದನ್ನು ಮಾಡಲಾಗುತ್ತದೆ ಎಂದರು.
ಆರ್ಯ ವೈಶ್ಯ, ಬ್ರಾಹ್ಮಣ ನಿಗಮಕ್ಕೆ ತಲಾ ಹತ್ತು ಕೋಟಿ: ಆರ್ಯವೈಶ್ಯ ನಿಗಮ ಮತ್ತು ಬ್ರಾಹ್ಮಣರ ನಿಗಮಕ್ಕೆ ಈ ವರ್ಷವೇ ತಲಾ ಹತ್ತು ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಶರವಣ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬಜೆಟ್ನಲ್ಲಿ ಕೊಟ್ಟು ಹೆಚ್ಚುವರಿ ಅನುದಾನ ಕೊಟ್ಟಿಲ್ಲ ಎನ್ನುವುದು ಸತ್ಯ, ಹೆಚ್ಚುವರಿ ಅನುದಾನದ ಪ್ರಸ್ತಾವನೆ ಇದೆ. ಈಗ ಆರು ಕೋಟಿ ಬ್ಯಾಂಕ್ನಲ್ಲಿದೆ, ಅದನ್ನು ಖರ್ಚು ಮಾಡಿ ಮತ್ತೆ ಕೊಡಲಿದ್ದೇವೆ.
ಆರ್ಯ ವೈಶ್ಯ ನಿಗಮದ್ದು ಹೆಚ್ಚುವರಿ ಅನುದಾನ ಪ್ರಸ್ತಾವನೆ ಬಾಕಿ ಇದೆ ಅದನ್ನೂ ಕೊಡಲಿದ್ದೇವೆ. ಇದೇ ವರ್ಷ ಎರಡೂ ನಿಗಮಕ್ಕೆ ತಲಾ ಹತ್ತು ಕೋಟಿ ಕೊಡಲಾಗುತ್ತದೆ. ಆರ್ಯ ವೈಶ್ಯ ನಿಗಮ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಎಲ್ಲ ಆನ್ ಲೈನ್ ವ್ಯವಸ್ಥೆ ಮಾಡಲಾಗಿದೆ'' ಎಂದು ನಿಗಮದ ಕಾರ್ಯವೈಖರಿಗೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.
ಜಲಮಂಡಳಿ ನೀರು ಸೋರಿಕೆ ಶೂನ್ಯಕ್ಕೆ ಪ್ರಯತ್ನ: ಜಲಮಂಡಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆ ಮಾರ್ಗದಲ್ಲಿನ ನೀರು ಸೋರಿಕೆ, ಅನಧಿಕೃತ ಸಂಪರ್ಕವನ್ನು ಶೂನ್ಯಕ್ಕೆ ತರುವ ಗುರಿ ಹಾಕಿಕೊಳ್ಳಲಾಗಿದೆ, ಇದರಲ್ಲಿ ಅಧಿಕಾರಿಗಳು ಭಾಗಿಯಾಗಿರುವುದನ್ನು ಪತ್ತೆ ಹೆಚ್ಚಲು ವಿಚಕ್ಷಣ ದಳ ರಚಿಸುವ ಚಿಂತನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜಲಮಂಡಳಿ ನೀರು ಸೋರಿಕೆ ಕುರಿತು ಬಿಜೆಪಿ ಸದಸ್ಯೆ ಭಾರತಿಶೆಟ್ಟಿ ಪ್ರಶ್ನೆಗೆ ಸಿಎಂ ಉತ್ತರಿಸಿದರು. ಬಿಡಬ್ಲ್ಯೂ ಎಸ್ಎಸ್ಬಿ ಹಿಂದಿನಿಂದಲೂ ಸಮಸ್ಯೆಯನ್ನು ಎದುರಿಸುತ್ತಿದೆ. ಅನಧಿಕೃತ ಸಂಪರ್ಕ, ಸೋರಿಕೆ, ಹಳೇ ಪೈಪ್ ಈ ರೀತಿಯ ಸಮಸ್ಯೆ ಇದೆ. ಸೋರಿಕೆ ಮತ್ತು ಅನಧಿಕೃತ ಸಂಪರ್ಕ ಎರಡು ಸಮಸ್ಯೆವಿದೆ.
ನಾನು ಸಿಎಂ ಆದಾಗ ಇದು ಶೇ.37 ರಷ್ಟಿತ್ತು. ಈಗ 29ಕ್ಕೆ ಬಂದಿದೆ. ಇದನ್ನ ಶೂನ್ಯಕ್ಕೆ ತರುವ ಕೆಲಸ ನಡೆಯುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದರೆ. ಅವರ ಪತ್ತೆಗೆ ವಿಜಿಲೆನ್ಸ್ ಮಾಡುವ ಪ್ಲಾನ್ ಮಾಡಿದ್ದೇನೆ. ಹಳೇ ಪೈಪ್ ಬದಲಾವಣೆ ಮಾಡುವ ಕೆಲಸ ಮಾಡುತ್ತಿದೇವೆ. ಎಲ್ಲ ರೀತಿಯ ಕ್ರಮ ಕೈಗೊಂಡು ಸೋರಿಕೆ, ನಷ್ಟ ತಡೆಗಟ್ಟುವ ಕೆಲಸ ಮಾಡುತ್ತೇವೆ ಎಂದರು.
ಹೊರಗುತ್ತಿಗೆಯಲ್ಲೂ ಮೀಸಲಾತಿ: ಹೊಸ ಗುತ್ತಿಗೆ ಆಧಾರಿತ ನೇಮಕಾತಿಯಲ್ಲಿ ಮೀಸಲಾತಿಯನ್ನ ನೀಡುವಲ್ಲಿ ಎರಡು ಮಾತಿಲ್ಲ ಮೀಸಲಾತಿ ಆಧಾರದಲ್ಲಿಯೇ ನೇಮಕಾತಿ ಮಾಡಲಾಗುತ್ತದೆ ಎಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು.
ಗುತ್ತಿಗೆ ಆಧಾರದ ಮೇಲಿನ ನೇಮಕಾತಿಯಲ್ಲಿ ಮೀಸಲಾತಿ ನೀಡುವ ವಿಚಾರವಾಗಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ.ಯಾವ್ಯಾವ ಸಮುದಾಯದಕ್ಕೆ ಎಷ್ಟು ಉದ್ಯೋಗ ನೀಡಲಾಗಿದೆ ಎಂದು ಮಾಹಿತಿಯನ್ನ ಕೇಳಿದ್ದೇನೆ. ಜೊತೆಗೆ ಏಜೆನ್ಸಿಗಳು ಗುತ್ತಿಗೆ ಆಧಾರದಲ್ಲಿ ನೇಮಿಸುತ್ತಾರೆ. ಕಾನೂನನ್ನ ಪರಿಶೀಲನೆ ನಡೆಸಿ ಗುತ್ತಿಗೆ ಆಧಾರದ ನೇಮಕಾತಿಯಲ್ಲೂ ಮೀಸಲಾತಿಯನ್ನು ಅಳವಡಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಶಾದಿ ಮಹಲ್ ಮಂಜೂರು ವಿಚಾರ: ಕಳೆದ ಬಜೆಟ್ ನಲ್ಲಿ ಅಲ್ಪಸಂಖ್ಯಾತ ನಿಗಮಕ್ಕೆ 60 ಕೋಟಿ ಕೊಟ್ಟಿದ್ದೆ. ಹೆಚ್ಚುವರಿಯಾಗಿ 50 ಕೋಟಿ ಕೋಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಪರ ಅಬ್ದುಲ್ ಜಬ್ಬಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಶಾದಿಮಹಲ್ ಕಳೆದ 3 ವರ್ಷದಲ್ಲಿ 57 ಶಾದಿಮಹಲ್ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು. ಹಳೆಯದು ಮೊದಲು ಮುಗಿಸೋಣ. ಆ ನಂತರ ಹೊಸದನ್ನ ನಿರ್ಮಾಣ ಮಾಡಲು ಕ್ರಮ ವಹಿಸುತ್ತೇವೆ. ಪಿಎಚ್ಡಿ ಹಣಕಾಸಿನ ನೆರವು ನೀಡುವುದು ನಿಂತುಹೋಗಿತ್ತು, ಅದನ್ನ ಪುನಃ ಆರಂಭಿಸಿದ್ದೇವೆ. ವಿದೇಶಕ್ಕೆ ಶಿಕ್ಷಣಕ್ಕೆ ಹೋಗುವವರಿಗೂ ಹಣ ಕೊಡ್ತಿದ್ದೇವೆ. ಬೀದಿ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವನ್ನು ನೀಡುತ್ತಿದ್ದೇವೆ. ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ವಸತಿ ಶಾಲೆ 29 ಜಿಲ್ಲೆಯಲ್ಲಿ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು.
ಯುಕೆಪಿ ನೋಟಿಫಿಕೇಷನ್ ಆಗಿಲ್ಲ: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ನೋಟಿಫಿಕೇಷನ್ ಆಗದಿರುವ ಹಿನ್ನಲೆಯಲ್ಲಿ ಕಾಲಮಿತಿಯಲ್ಲಿ ಯೋಜನೆ ಮುಕ್ತಾಯದ ನಿಲುವು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಆದರೆ, ರಾಜ್ಯದ ಮಿತಿಯಲ್ಲಿ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಜಲಸಂಪನ್ಮೂಲ ಸಚಿವರ ಪರವಾಗಿ ಉತ್ತರಿಸಿದ ಸಚಿವ ಮಾಧುಸ್ವಾಮಿ, ಯುಕೆಪಿ ಮೂರನೇ ಹಂತ ನೋಟಿಫಿಕೇಷನ್ ಆಗಿಲ್ಲ. ಹಾಗಾಗಿ ಸರ್ಕಾರ ಯೋಜನೆ ಮುಗಿಸುವ ಕಾಲಮಿತಿ ಹೇಳುವ ಸ್ಥಿತಿಯಲ್ಲಿ ಇಲ್ಲ. ಹಂತ ಹಂತವಾಗಿ ನಮ್ಮ ಮಿತಿಯಲ್ಲಿ ಮಾಡಲಿದ್ದೇವೆ. ಭೂಸ್ವಾಧೀನದಲ್ಲಿ ಆಕಸ್ಮಿಕವಾಗಿ ತಾರತಮ್ಯ ಆಯಿತು. ಇಲ್ಲಿ ಕಡಿಮೆ ದರ ಇದ್ದ ಕಾರಣ ನಾಲ್ಕು ಪಟ್ಟು ಹೆಚ್ಚು ಅನುದಾನ ಕೊಡಲು ಸಂಪುಟದಲ್ಲಿ ನಿರ್ಧರಿಸಲಾಯಿತು. ಇದು ಆ ಭಾಗಕ್ಕೆ ಮಾತ್ರನಾ ಬೇರೆ ಕಡೆ ಈ ದರ ಅನ್ವಯ ಆಗಲ್ಲ ಎಂದ ಅವರು, ಭದ್ರಾ ನಮ್ಮದು ಹಾಗಾಗಿ ನಾವು ರಾಷ್ಟ್ರೀಯ ಯೋಜನೆ ಮಾಡಿದ್ದೆವು. ಕೃಷ್ಣ ಅಂತರಾಜ್ಯದ್ದಾಗಿದೆ. ಹಾಗಾಗಿ ಅದು ನಮ್ಮ ರಾಜ್ಯದಿಂದಲೇ ಮಾಡಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು: ಸಚಿವ ಅಶ್ವತ್ಥನಾರಾಯಣ್ ವಿವಾದ