ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಕಾಲ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಯಾವ ಸಮಯದಲ್ಲಿ ಬೇಕಾದರೂ ಬಿಡುಗಡೆ ಆಗಬಹುದು ಅನ್ನೋ ಸುದ್ದಿ ಆಗಿಂದಾಗ ಕೇಳಿ ಬರ್ತಿತ್ತು. ಅಲ್ಲದೇ ತನ್ನ ಬಿಡುಗಡೆಗೆ ದಿನಾಂಕ ನಿಗದಿ ಮಾಡುವ ಅವಧಿಗೂ ಮುನ್ನ ತನ್ನನ್ನು ಜೈಲಿಂದ ಬಿಡುಗಡೆ ಮಾಡಿ ಅಂತ ಈ ಹಿಂದೆಯೇ ಅವರು ಜೈಲಧಿಕಾರಿಗಳಿಗೆ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಸನ್ನಡತೆ ಹಾಗೂ 135 ದಿನಗಳ ರಜೆ ಕಳೆದು ಬಿಡುಗಡೆ ಮಾಡುವಂತೆ ಶಶಿಕಲಾ ನಟರಾಜನ್ ಜೈಲಧಿಕಾರಿಗಳಿಗೆ ಮನವಿ ಪತ್ರ ಬರೆದಿದ್ದರು. ಇದೀಗ ಅವರ ಪತ್ರಕ್ಕೆ ಜೈಲಧಿಕಾರಿಗಳು ಪ್ರತಿಕ್ರಿಯಿಸಿದ್ದು, ನಿಮ್ಮನ್ನು ಅವಧಿಗೂ ಮುನ್ನ ಯಾಕೆ ಬಿಡುಗಡೆ ಮಾಡಬೇಕೆಂದು ಕೇಳಿದ್ದಾರೆ.
ಶಶಿಕಲಾ ನಟರಾಜನ್ ಅವರ ನಾಲ್ಕು ವರ್ಷದ ಜೈಲು ಶಿಕ್ಷೆ 2021 ಫೆ.15ಕ್ಕೆ ಮುಕ್ತಾಯವಾಗುತ್ತೆ. ಆದರೆ ಜ.27ಕ್ಕೆ ಬಿಡುಗಡೆ ಮಾಡೋಕೆ ಅಲ್ಲಿನ ಹಿರಿಯ ಅಧಿಕಾರಿಗಳು ನಿರ್ಧಾರ ಮಾಡಿದ್ದರು.
ಜೈಲಲ್ಲಿ ಕನ್ನಡ ಕಲಿತ ಶಶಿಕಲಾ:
ನಾಲ್ಕು ವರ್ಷದ ಜೈಲುವಾಸದಲ್ಲಿ ಶಶಿಕಲಾ ತರಕಾರಿ ಬೆಳೆದಿದ್ದು, ಬೆಳೆದ ತರಕಾರಿಯನ್ನು ಜೈಲಿನಲ್ಲಿ ತಯಾರಾಗುವ ಅಡುಗೆಗೆ ಬಳಕೆ ಮಾಡಲಾಗಿದೆ. ಆದರೆ ಅದಕ್ಕೆ ಕೂಲಿ ಪಡೆಯದ ಶಶಿಕಲಾ, ತನ್ನ ನಾಲ್ಕು ವರ್ಷಗಳ ಜೈಲುವಾಸವನ್ನು ಸಾಧಾರಣವಾಗಿ ಕಳೆದಿದ್ದಾರೆ. ಜೊತೆಗೆ ಜೈಲಿನಲ್ಲಿ ನಲಿಕಲಿ ಮೂಲಕ ಕನ್ನಡ ಕಲಿತಿದ್ದಾರೆ. ಸಂಪೂರ್ಣವಾಗಿ ಕನ್ನಡ ಅಭ್ಯಾಸ ಮಾಡಿದ್ದು, ಕನ್ನಡ ಓದಲು ಹಾಗೂ ಬರೆಯಲು ಕಲಿತು ಕಲಿಕೆಯ ಕೋರ್ಸ್ ಮುಗಿಸಿದ್ದಾರೆ.