ಬೆಂಗಳೂರು : ರಾಜ್ಯ ಸರ್ಕಾರದ ಬಜೆಟ್ ನಂತರ ಇದೀಗ ಎಲ್ಲರ ಚಿತ್ತ ಬಿಬಿಎಂಪಿ ಆಯವ್ಯಯದತ್ತ ನೆಟ್ಟಿದೆ. ಆರ್ಥಿಕ ವರ್ಷ ಮುಕ್ತಾಯಕ್ಕೆ ಮೂರು ವಾರಗಳು ಮಾತ್ರ ಬಾಕಿಯಿದ್ದು, ಪಾಲಿಕೆ ಆಯುಕ್ತರು ಬಜೆಟ್ ಮಂಡನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಾರ್ಚ್ ಕೊನೆಯ ವಾರದಲ್ಲಿ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ. ಬಿಬಿಎಂಪಿ ಹಣಕಾಸು ಹೊಣೆಗಾರಿಕೆ ಹಾಗೂ ಆಯವ್ಯಯ ನಿರ್ವಹಣಾ ನಿಯಮ - 2021 ಜಾರಿ ಮಾಡಿದ್ದು, ಬಿಬಿಎಂಪಿ ಹಣಕಾಸು ನಿಯಮದ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ.
ಅನುದಾನ ಮತ್ತು ಆದಾಯದಿಂದ ಬರುವ ಪ್ರತಿ ರೂಪಾಯಿಗೆ ತಕ್ಕ ಬಜೆಟ್ ಮಂಡಿಸಬೇಕು. ಪ್ರತಿ ಕಾಮಗಾರಿ, ಕೆಲಸಕ್ಕೂ ಕಡ್ಡಾಯವಾಗಿ ಜಾಬ್ ಕೋಡ್ ನೀಡಬೇಕು. ಲೆಕ್ಕಪತ್ರ ನಿರ್ವಹಣೆಯನ್ನು ಪ್ರತಿವರ್ಷ ಪ್ರಕಟಿಸಲೇಬೇಕು ಎಂದು ತಿಳಿಸಿದೆ.
ಇನ್ನು ಬಿಬಿಎಂಪಿ ಈ ನಿಯಮ ಜಾರಿಗೆ ತರುತ್ತಿರುವ ದೇಶದಲ್ಲೇ ಮೊಟ್ಟ ಮೊದಲ ಸ್ಥಳೀಯ ಸಂಸ್ಥೆಯಾಗಲಿದೆ. ಬರೀ ಅನುದಾನ ಅವಲಂಬಿಸದೆ ಆರ್ಥಿಕ ಸ್ವಾವಲಂಬನೆ ಸಾಧಿಸುವುದು ನಿಯಮದ ಉದ್ದೇಶವಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಗೌರವ್ ಗುಪ್ತಾ, ಬಜೆಟ್ ಸಿದ್ಧತೆ ನಡೆಯುತ್ತಿದ್ದು, ಪ್ರಮುಖವಾಗಿ ಆದಾಯ ಮೂಲಗಳನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು,ಯಾವ ಮಾದರಿಯಲ್ಲಿ ಮಾಡಬೇಕು ಎಂಬ ಸಂಪನ್ಮೂಲಗಳ ಕ್ರೋಢೀಕರಣ ಹಾಗೂ ಮತ್ತೊಂದು ಕಡೆ ವೆಚ್ಚದ ಕುರಿತು ಕೂಡ ಗಮನಹರಿಸಬೇಕಿದೆ.
ಇದಕ್ಕಾಗಿ ಹಿರಿಯ ಅಧಿಕಾರಿಗಳು ಎಲ್ಲಾ ಸೇರಿ ವಿಶ್ಲೇಷಣೆ ಮಾಡಿದ್ದು, ಮುಂದಿನ ಹಂತದಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ಕೊಡಬೇಕು ಎಂಬುದರ ಕುರಿತು ಚರ್ಚೆ ನಡೀತಿದೆ. ಮುಂದಿನ ವಾರ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಸಭೆ ಇದ್ದು, ತದ ನಂತರ ಬಜೆಟ್ ಗಾತ್ರದ ಕುರಿತು ಒಂದು ಸಂಪೂರ್ಣ ಚಿತ್ರಣ ಸಿಗಲಿದೆ ಎಂದರು.
ಇದನ್ನೂ ಓದಿ: ರಾಜ್ಯ ವಿಧಾನಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಘೋಷಣೆ