ಹೊಸಕೋಟೆ: ತಾಲೂಕು ವೈದ್ಯಾಧಿಕಾರಿ ನೇತೃತ್ವದ ತಂಡ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದು, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ಲಾಸ್ಟಿಕ್ ಬ್ಯಾಗ್, ಲೋಟ ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರ ನಿಷೇಧಿಸಿದ್ದರೂ ಕೂಡ ಪಟ್ಟಣದ ಕೆಲ ಅಂಗಡಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದು ಕಂಡು ಬಂದಿತ್ತು ಹಾಗೂ ಈ ಕುರಿತು ಸಾರ್ವಜನಿಕರ ದೂರುಗಳು ಬಂದಿದ್ದವು.
ಈ ಹಿನ್ನೆಲೆ ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್ ಹಾಗೂ ತಂಡದವರು ತಾಲೂಕಿನ ಸೂಲಿಬೆಲೆ ಹೋಬಳಿಯ ಅಂಗಡಿಗಳ ಮೇಲೆ ದಾಳಿ ನಡೆಸಿ ಅಲ್ಲಿ ಶೇಖರಿಸಿಟ್ಟಿದ್ದ ಪ್ಲಾಸ್ಟಿಕ್ ಲೋಟ, ಕವರ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮ ಪಂಚಾಯತ್ ಅಧಿಕಾರಿಗಳ ಸಹಯೋಗದಲ್ಲಿ ಮುಂದಿನ ವಾರ ಮತ್ತೆ ದಾಳಿ ನಡೆಸಲಾಗುವುದು. ಪ್ಲಾಸ್ಟಿಕ್ ಮಾರಾಟ ಮಾಡುವ ವರ್ತಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನೂ ಪಟ್ಟಣದಲ್ಲಿ ಮಾಸ್ಕ್ ಧರಿಸದೆ ಓಡಾಡುವ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿ ಕ್ರಮ ಕೈಗೊಂಡರು. ಬಿಎಂಟಿಸಿ ಬಸ್, ಆಟೋ, ಕಾರುಗಳಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ 41 ಜನರಿಂದ 4,100 ರೂ. ದಂಡ ವಸೂಲಿ ಮಾಡಿ, ಎಚ್ಚರಿಕೆ ನೀಡಿದರು.
ಪಟ್ಟಣದ ಹೋಟೆಲ್, ಕಿರಾಣಿ ಅಂಗಡಿಗಳು, ಬೇಕರಿ ಬಳಿ ಕುಳಿತುಕೊಳ್ಳುವ ಸಾರ್ವಜನಿಕರಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.