ದೇವನಹಳ್ಳಿ (ಬೆಂಗಳೂರು): ಹಳೇ ದ್ವೇಷದ ಹಿನ್ನೆಲೆಯಲ್ಲಿ ಗ್ರಾಮದ ಯುವಕ ಯುವತಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಆರೋಪಿಗಳನ್ನು ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಚೀಮಾಚನಹಳ್ಳಿ ಗ್ರಾಮದ ನಿವಾಸಿಗಳಾದ ಆಕಾಶ್(22) ಅಲಿಯಾಸ್ ಮೊಟ್ಟೆ ನಲ್ಲಪ್ಪನಹಳ್ಳಿ, ನಿತಿನ್ ಕುಮಾರ್(22) ಅಲಿಯಾಸ್ ವಿನೋದ್ ಚೀಮಾಚನಹಳ್ಳಿ, ಮುನಿರಾಜು(36) ಬಂಧಿತರು.
ಆಕಾಶ್ ಚೀಮಾಚನಹಳ್ಳಿ ಗ್ರಾಮದ ಕೆಲ ಯುವಕ-ಯುವಕರು ಮತ್ತು ದೇವನಹಳ್ಳಿ ತಾಲೂಕಿನ ಪ್ರಮುಖ ವ್ಯಕ್ತಿಗಳ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ. ಈ ಬಗ್ಗೆ ಚೀಮಾಚನಹಳ್ಳಿ ಗ್ರಾಮದ ಮಂಜುಳ ಎಂಬುವವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕುರಿತು ದೂರು ದಾಖಲಿಸಿಕೊಂಡ ಚನ್ನರಾಯಪಟ್ಟಣ ಪೊಲೀಸರು ಸಿಇಎನ್ ಪೊಲೀಸರ ಸಹಾಯದೊಂದಿಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ಹಳೇ ದ್ವೇಷದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.
ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು: ಮುಂಜಾನೆ ಸಮಯದಲ್ಲಿ ರಸ್ತೆ ಬದಿಯ ಎಲ್ಇಡಿ ಲೈಟ್ ಕಳ್ಳತನಕ್ಕೆ ಯತ್ನಿಸಿದ ಇಬ್ಬರು ಕಳ್ಳರನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಗಂಗೋಡನಹಳ್ಳಿಯ ರೈಲ್ವೆ ಬ್ರಿಡ್ಜ್ ಬಳಿ ಬೆಳಕಿಗೆ ಎಲ್ಇಡಿ ಲೈಟ್ ಅಳವಡಿಸಲಾಗಿದ್ದು, ಫೆ.14ರ ಮುಂಜಾನೆ 5ರ ಸಮಯದಲ್ಲಿ ಲೈಟ್ನ ವೈರ್ಗಳನ್ನು ಕಟ್ ಮಾಡಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಇಬ್ಬರು ಕಳ್ಳರನ್ನು ಹಿಡಿದು ಮಾದನಾಯಕನಹಳ್ಳಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಬಂಧಿತ ಆರೋಪಿಗಳನ್ನು ರವಿಚಂದ್ರ, ನಂದಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಆಕ್ಟೀವಾ ಗಾಡಿ ಮತ್ತು ಎಲ್ಇಡಿ ಲೈಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವೆಬ್ಸಿರೀಸ್ನಿಂದ ಪ್ರೇರಿತಗೊಂಡು ಅಪಹರಣ, ಸುಲಿಗೆ: ಹೈದರಾಬಾದ್‌ನಲ್ಲಿ ಗ್ಯಾಂಗ್ ಬಂಧನ