ಬೆಂಗಳೂರು: ವಿಧಾನಸಭೆಯಲ್ಲಿ ಮಂಡನೆಯಾಗಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022ನ್ನು ಮುಂದಿನ ಅಧಿವೇಶನದಲ್ಲಿ ಮರು ಮಂಡನೆ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಸಮಾಧಾನ ವ್ಯಕ್ತಪಡಿಸಿದ ನಾಗಾಭರಣ: ವಿಧಾಮಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೊನ್ನೆ ನಡೆದ ಅಧಿವೇಶನದಲ್ಲಿ ಮಂಡಿಸಲಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡ ಅನುಷ್ಠಾನ ಪ್ರಧಿಕಾರದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಪ್ರಾಧಿಕಾರ ನೀಡಿದ ಕರಡಿನಲ್ಲಿದ್ದ ದಂಡ ವಿಚಾರ, ಜಾರಿ ನಿರ್ದೇಶನ ವ್ಯವಸ್ಥೆಯನ್ನು ಸರ್ಕಾರ ಬದಲಿಸಿದೆ.
ಕಳ್ಳನ ಕೈಗೆ ಅಧಿಕಾರ ಕೊಟ್ಟರೆ ಹೇಗೆ ಆಗಲಿದೆ. ನಾವು ಕೊಟ್ಟ ಕರಡಿನಲ್ಲಿ ಪ್ರಾಧಿಕಾರದ ಅಧ್ಯಕ್ಷರಿಗೆ ಜಾರಿ ನಿರ್ದೇಶನದ ಅಧಿಕಾರ ಕೊಡಲಾಗಿತ್ತು. ಆದರೆ, ಸರ್ಕಾರ ಮಂಡಿಸಿದ ವಿಧೇಯಕದಲ್ಲಿ ಮುಖ್ಯ ಕಾರ್ಯದರ್ಶಿಗೆ ಜವಾಬ್ದಾರಿ ಕೊಡಲಾಗಿದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ವಿಧೇಯಕ ಬದಲಾವಣೆ ಮಾಡಬೇಕು: ಈ ಅಂಶದ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದೆ. ಪ್ರಾಧಿಕಾರದ ಸ್ವಾಯತ್ತತೆ ಮೊಟಕು ಮಾಡಲಾಗಿದೆ. ಅಧಿಕಾರಿಗಳು ಶಿಸ್ತು ಕ್ರಮದ ಅಂಶವನ್ನು ಬದಲಾಯಿಸಿದ್ದಾರೆ. ಪ್ರಾಧಿಕಾರ ನೀಡಿದ ಕರಡು ವಿಧೇಯಕಕ್ಕೂ ಸರ್ಕಾರ ಮಂಡಿಸಿದ ವಿಧೇಯಕಕ್ಕೂ ಸಾಕಷ್ಟು ವ್ಯತ್ಯಾಸ ಇದೆ.
ಹೀಗಾಗಿ ಈ ವಿಧೇಯಕವನ್ನು ಬದಲಾವಣೆ ಮಾಡಿ ಬೆಳಗಾವಿ ಅಧಿವೇಶನದಲ್ಲಿ ಮರುಮಂಡನೆ ಮಾಡಬೇಕು. ಕನ್ನಡ ಅನುಷ್ಠಾನ ಪ್ರಾಧಿಕಾರದ ಶಕ್ತಿಯನ್ನು ಕುಂದಿಸಿದ್ದಾರೆ. ನಾವು ನೀಡಿದ ವಿಧೇಯಕದ ಕರಡನ್ನು ಮರು ಮಂಡನೆ ಮಾಡಬೇಕು. ವಿಧೇಯಕದ ವಿಚಾರ ಸಿಎಂ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಪತ್ರವನ್ನು ಬರೆಯಲಾಗಿದೆ ಎಂದು ತಿಳಿಸಿದರು.
ಏನಿದು ವ್ಯತ್ಯಾಸ?: ನಾವು ನೀಡಿದ ಕರಡಿನಲ್ಲಿ ಅಧಿಕೃತ ಭಾಷೆಯನ್ನು ಜಾರಿಗೊಳಿಸುವ ಕರ್ತವ್ಯವನ್ನು ವಹಿಸಿಕೊಂಡ ಸರ್ಕಾರಿ ಅಧಿಕಾರಿ ಈ ಅಧಿನಿಯಮದ ಉಪಬಂಧಗಳನ್ನು ಪಾಲಿಸಲು ವಿಫಲರಾದರೆ ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಅಂಶ ಸೇರಿಸಲಾಗಿತ್ತು. ಕನ್ನಡ ಭಾಷೆಯನ್ನು ಬಳಸುವಲ್ಲಿ ಸರ್ಕಾರಿ ಅಧಿಕಾರಿಗಳ ವೈಫಲ್ಯವನ್ನು ಕರ್ತವ್ಯ ಲೋಪವೆಂದು ಭಾವಿಸಬೇಕು. ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಆಯಾ ಸಮಿತಿಗಳು ರಾಜ್ಯ ಮಟ್ಟದ ಸಮಿತಿಗೆ ವರದಿ ಮಾಡಬೇಕು ಎಂಬುದನ್ನು ಸೇರಿಸಲಾಗಿತ್ತು.
ದಂಡ ವಿಧಿಸುವ ಅಧಿಕಾರ: ಖಾಸಗಿ ವ್ಯಕ್ತಿಗಳು, ಕೈಗಾರಿಕೆ, ಅಂಗಡಿ, ವಾಣಿಜ್ಯ ಸಂಸ್ಥೆಯ ಮಾಲೀಕರು ಕನ್ನಡ ಅನುಷ್ಠಾನದಲ್ಲಿ ವಿಫಲರಾದರೆ ಅವರಿಗೆ ದಂಡ ವಿಧಿಸುವಂತೆ ಪ್ರಾಧಿಕಾರದ ಕರಡು ವಿಧೇಯಕದಲ್ಲಿ ಹೇಳಲಾಗಿತ್ತು. ಅದರಂತೆ ಮೊದಲನೆಯ ಅಪರಾಧಕ್ಕೆ 5,000 ರೂ.ದಂಡ, ಎರಡನೆಯ ಅಪರಾಧಕ್ಕಾಗಿ 10,000 ವರಗೆ ದಂಡ, ನಂತರದ ಪ್ರತಿಯೊಂದು ಅಪರಾಧಕ್ಕಾಗಿ 20,000 ರೂ. ವರೆಗೆ ದಂಡ ಹಾಗೂ ಪರವಾನಗಿಯನ್ನು ರದ್ದು ಗೊಳಿಸಲು ಕ್ರಮ ವಹಿಸುವ ಅಂಶ ಸೇರಿಸಲಾಗಿತ್ತು.
ಕಾನೂನು ಆಯೋಗ ಶಿಫಾರಸು ಮಾಡಿದ ವಿಧೇಯಕದಲ್ಲಿ ಪ್ರಾಧಿಕಾರದ ಅಧ್ಯಕ್ಷರನ್ನು ಸಮಿತಿಯ ಅಧ್ಯಕ್ಷರನ್ನಾಗಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯ ಅವರನ್ನು ಸಹ - ಅಧ್ಯಕ್ಷರನ್ನಾಗಿ ಹಾಗೂ ಕಸಾಪದ ಅಧ್ಯಕ್ಷರನ್ನು ಸಮಿತಿಯಲ್ಲಿ ಒಬ್ಬ ಸದಸ್ಯರನ್ನಾಗಿ ನೇಮಿಸಲು ಅಭಿಪ್ರಾಯಪಟ್ಟಿತ್ತು.
ಉಪಾಧ್ಯಕ್ಷರ ಸ್ಥಾನ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ: ಆದರೆ, ವಿಧಾನಸಭೆಯಲ್ಲಿ ಮಂಡಿಸಿದ ವಿಧೇಯಕದಲ್ಲಿ ಪ್ರಾಧಿಕಾರದ ಅಧ್ಯಕ್ಷರನ್ನು ಕೇವಲ ಸಮಿತಿಯ ಸದಸ್ಯರನ್ನಾಗಿ ಮಾಡಿ, ಕಸಾಪ ಅಧ್ಯಕ್ಷರನ್ನು ಕೈ ಬಿಡಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹುದ್ದೆ ಸಚಿವ ಸಂಪುಟ ದರ್ಜೆಯ ಸ್ಥಾನಮಾನವನ್ನು ಹೊಂದಿರುವುದಾಗಿರುತ್ತದೆ. ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಹೊಂದಿರುವ ಹುದ್ದೆಗಿಂತ ಹೆಚ್ಚಿನ ಜವಾಬ್ದಾರಿಯನ್ನು ಅಂದರೆ, ಉಪಾಧ್ಯಕ್ಷರ ಸ್ಥಾನವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೀಡುವುದು ಶಿಷ್ಟಾಚಾರದ ಪ್ರಕಾರ ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕನ್ನಡಕ್ಕೆ ಕಾನೂನಿನ ಬಲ ಬೇಕು: ಟಿ.ಎಸ್ ನಾಗಾಭರಣ
ಕನ್ನಡ ಭಾಷೆಯ ಅನುಷ್ಠಾನಕ್ಕೆ ಮತ್ತು ಅದನ್ನು ಕಾನೂನುಬದ್ಧಗೊಳಿಸಲು ಜಾರಿಗೊಳಿಸಬೇಕೆಂದು ಸರ್ಕಾರ ತೀರ್ಮಾನಿಸಿ, ಮಾಡಿರುವ ವಿಧೇಯಕಕ್ಕೆ ಪೂರಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಧಿಕಾರದ ಅಧ್ಯಕ್ಷರಿಗೆ ರಾಜ್ಯ ಮಟ್ಟದ ಸಮಿತಿಯ ಅಧ್ಯಕ್ಷರ ಅಥವಾ ಉಪಾಧ್ಯಕ್ಷರ ಸ್ಥಾನವನ್ನು ನೀಡಬೇಕು. ಇಡೀ ಸಮಿತಿಯಲ್ಲಿ ಸರ್ಕಾರಿ ಅಧಿಕಾರಿಗಳು ಮಾತ್ರವೇ ಸದಸ್ಯರಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.