ಬೆಂಗಳೂರು : ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವಿರುದ್ಧದ ಹೋರಾಟದಲ್ಲಿ ನರ್ಸ್ಗಳ ಪಾತ್ರವೂ ದೊಡ್ಡ. ಮೊದ ಮೊದಲು ಭಯ- ಆತಂಕ ಇದ್ದರೂ, ಮುಂದೆ ಇಟ್ಟ ಹೆಜ್ಜೆ ಹಿಂದಕ್ಕಿರಿಸದೇ, ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಯೋಧರಂತೆ ತಮ್ಮ ಕಾರ್ಯ ನಿರ್ವಹಿಸುತ್ತಿರುವ ಇವರೆಲ್ಲರಿಗೂ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯ ಶುಭಾಷಯಗಳು.
ಈ ವಿಶೇಷ ದಿನದಂದು ನಗರದ ಸರ್ ಸಿ ವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನರ್ಸ್ ಹೇಮಾವತಿ ಈಟಿವಿ ಭಾರತದೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 14 ದಿನಗಳ ಕಾಲ ಪ್ರತಿ ಕ್ಷಣ ರೋಗಿಗಳನ್ನು ನೋಡಿಕೊಳ್ಳುವುದು. ಅವರಿಗೆ ಮಾನಸಿಕ ಖಿನ್ನತೆ ಉಂಟಾಗದಂತೆ ಜಾಗೃತೆ ವಹಿಸುವುದು ಮುಖ್ಯವಾಗಿತ್ತು. ಅದರ ಜೊತೆ ನಮ್ಮ ರಕ್ಷಣೆ ಮಾಡಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಆಗಿತ್ತು ಎಂದರು.
ಅಲ್ಲದೇ ಇಲ್ಲಿ ನಾವಷ್ಟೇ ಕೊರೊನಾ ವಾರಿಯರ್ಸ್ ಆಗಿರಲಿಲ್ಲ. ನಮ್ಮ ಕುಟುಂಬದವರು ಸಹ ನಮ್ಮೊಟ್ಟಿಗೆ ಕೊರೊನಾ ವಾರಿಯರ್ಸ್ ಆಗಿದ್ದರು. ಕುಟುಂಬ ಸದಸ್ಯರ ಸಹಕಾರ, ಬೆಂಬಲ ಇಲ್ಲದಿದ್ದರೆ ನಾವು ಇಷ್ಟರ ಮಟ್ಟಿಗೆ ಕೆಲಸ ಮಾಡಲು ಆಗುತ್ತಿರಲಿಲ್ಲ. ಇದೀಗ ಇಡೀ ದೇಶವೇ ನಮ್ಮನ್ನ ಗೌರವಿಸುತ್ತಿದೆ. ನರ್ಸ್ ಆಗಿರುವುದಕ್ಕೆ ಬಹಳ ಹೆಮ್ಮೆ ಇದೆ ಅಂದರು.
ಇದೇ ರೀತಿ ಅನೇಕ ಮಂದಿ ನರ್ಸ್ಗಳು ಕೊರೊನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರೆಲ್ಲರಿಗೂ ಕೂಡ ನಮ್ಮ ಕಡೆಯಿಂದ ಒಂದು ಸಲಾಂ..