ಬೆಂಗಳೂರು: ಅನ್ಲಾಕ್ ಜಾರಿಯಾಗಿ ಇಂದಿಗೆ ಎರಡು ದಿನವಾಗಿದ್ದು, ನಗರದ ಜನಜೀವನ ಬಹುತೇಕ ಸಹಜ ಸ್ಥಿತಿಗೆ ಬಂದಿದೆ. ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸುರಕ್ಷಾ ಕ್ರಮಗಳೊಂದಿಗೆ ಬಸ್ ಓಡಿಸಲು ಬಿಎಂಟಿಸಿ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಅನ್ಲಾಕ್ ಮೊದಲ ದಿನವಾದ ನಿನ್ನೆ ಒಂದು ಪಾಳಿಯಲ್ಲಿ ಒಂದು ಸಾವಿರ ಬಸ್ಗಳಂತೆ ಎರಡು ಪಾಳಿಗಳಲ್ಲಿ ಒಟ್ಟು ಎರಡು ಸಾವಿರ ಬಸ್ಗಳನ್ನು ಬಿಎಂಟಿಸಿ ರಸ್ತೆಗಿಳಿಸಿತ್ತು. ಒಟ್ಟು 5 ರಿಂದ 6 ಸಾವಿರ ಬಸ್ಗಳಿದ್ದರೂ, ಮೊದಲ ದಿನ ಪ್ರಯಾಣಿಕರ ಸಂಖ್ಯೆ ಕಡಿಮೆ ಇರಬಹುದೆಂದು ಅರ್ಧದಷ್ಟು ಬಸ್ಗಳನ್ನು ಮಾತ್ರ ಓಡಿಸಲು ಪ್ಲ್ಯಾನ್ ಮಾಡಲಾಗಿತ್ತು.
ಆದರೆ, ಮೊದಲ ದಿನವೇ ಮೆಜೆಸ್ಟಿಕ್ನತ್ತ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಬಸ್ ಕೊರತೆಯಾಗಿ ಜನ ಪರದಾಡಬೇಕಾಯಿತು. ಕಚೇರಿ, ಮನೆಗೆ ಹೋಗಬೇಕಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಾಗಿ, ಇಂದು ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡುವುದಾಗಿ ಬಿಎಂಟಿಸಿ ಭರವಸೆ ನೀಡಿದೆ.
ಕಳೆದ ರಾತ್ರಿ ನಗರದಲ್ಲೇ 1,000 ಕ್ಕೂ ಅಧಿಕ ಬಸ್‌ಗಳು ಹಾಲ್ಟ್ ಆಗಿದ್ದವು. ಇಂದು ಬೆಳಗ್ಗೆ 6 ಗಂಟೆಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ಪ್ರವೇಶಿಸಿದ ಬಸ್‌ಗಳು, ಮುಂಜಾನೆಯಿಂದಲೇ ವಿವಿಧ ಭಾಗಗಳಿಗೆ ಸಂಚಾರ ಆರಂಭಿಸಿವೆ. ಇಂದು ಬಸ್‌ಗಳು ಸಂಖ್ಯೆ ಹೆಚ್ಚಿದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಕಂಡು ಬಂತು. ಕೆಲವು ಬಸ್‌ಗಳು ಖಾಲಿಯಾಗಿ ಸಂಚರಿಸುತ್ತಿದ್ದವು.
ಬಿಎಂಟಿಸಿ ಮೊದಲಿನ ರೀತಿ ಸಹಜ ಸ್ಥಿತಿಗೆ ಮರಳಲು ಇನ್ನೂ ಕೆಲ ದಿನಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಬೆಳಗ್ಗೆ ಮೆಜೆಸ್ಟಿಕ್ ಬಸ್ನಿಲ್ದಾಣಕ್ಕೆ ಆಗಮಿಸಿದ ಬಿಎಂಟಿಸಿ ಸಂಚಾರ ವಿಭಾಗದ ವ್ಯವಸ್ಥಾಪಕ ರಾಜೇಶ್, ಬಸ್ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ₹ 99.99: ಮುಂಬೈನಲ್ಲಿ ಹೊಸ ದಾಖಲೆ