ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಗಾಳಿಗೆ ತೂರಿ ಕ್ರೈಸ್ಟ್ ಯೂನಿವರ್ಸಿಟಿ ಡಿಗ್ರಿ ವಿದ್ಯಾರ್ಥಿಗಳಿಗೆ ಇಂದಿನಿಂದ ಆನ್ಲೈನ್ ಪರೀಕ್ಷೆ ನಡೆಸುತ್ತಿರುವುದನ್ನು ಖಂಡಿಸಿ ಎನ್ಎಸ್ಯುಐ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಡೈರಿ ವೃತ್ತ ಸಮೀಪ ಇರುವ ಕ್ರೈಸ್ಟ್ ವಿಶ್ವವಿದ್ಯಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಆನ್ಲೈನ್ ಪರೀಕ್ಷೆ ನಡೆಸದಂತೆ ಆಗ್ರಹಿಸಿದರು. ಒಂದು ದಿನ ಕ್ಲಾಸ್ ನಡೆದಿಲ್ಲ. ಆನ್ಲೈನ್ ಪಾಠ ನಮಗೆ ಅರ್ಥ ಆಗಿಲ್ಲ. ಹೀಗಾಗಿ ಪರೀಕ್ಷೆ ನಡೆಸದಂತೆ ಒತ್ತಾಯಿಸಿದರು.
ನಾಳೆ ರಾತ್ರಿಯಿಂದ ಲಾಕ್ಡೌನ್ ಇರಲಿದೆ. ಇದರಿಂದ ಓಡಾಟ ಕಷ್ಟ. ಹಾಗಾಗಿ ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದರು. ವಿದ್ಯಾರ್ಥಿಗಳ ಮನವಿ ಸ್ವೀಕರಿಸದ ಯೂನಿವರ್ಸಿಟಿ ಕುಲಪತಿಗಳ ವಿರುದ್ಧವೂ ಘೋಷಣೆ ಕೂಗಿದರು. ವಿವಿ ಕ್ಯಾಂಪಸ್ ಗೇಟ್ಗೆ ಬೀಗ ಹಾಕಿ ಆಕ್ರೋಶ ಹೊರ ಹಾಕಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದರು.