ಬೆಂಗಳೂರು: ನಾವು, ನಮ್ಮದು, ನಮ್ಮವರು ಎಂಬ ಭಾವನೆಗಳೇ ದೂರ ಆಗಿರುವ ಈ ಕಾಲದಲ್ಲಿ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ವಿದೇಶಗಳಿಂದ ವಾಪಸ್ ಆಗಿರುವ ಕನ್ನಡಿಗರು ಸಹಾಯ ಹಸ್ತ ಚಾಚಿದ್ದಾರೆ.
ಅಮೆರಿಕ, ಯುರೋಪ್ ಮತ್ತು ಅರಬ್ ರಾಷ್ಟ್ರಗಳಿಂದ ವಾಪಸ್ ಆಗಿರುವ ಕನ್ನಡಿಗರು ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡು, ವಿದೇಶಗಳಲ್ಲಿರುವ ಕನ್ನಡಿಗರಿಂದ ಹಣ ಸಂಗ್ರಹಿಸಿ ಕೊರೊನಾ ಸಂಕಷ್ಟಲ್ಲಿರುವವರಿಗೆ ನೆರವಾಗುತ್ತಿದ್ದಾರೆ. ಫ್ಯಾಮಿಲಿ ಅಂಡ್ ಫ್ರೆಂಡ್ಸ್ ಆಫ್ ಇಂಡಿಯಾ ಎಂಬ ಗ್ರೂಪ್ ಮಾಡಿಕೊಂಡು ಇದುವರೆಗೂ 15 ಲಕ್ಷ ಹಣ ಸಂಗ್ರಹಿಸಿದ್ದಾರೆ. ಈ ಹಣದಿಂದ ರೋಗಿಗಳು, ಬಡ ಕಾರ್ಮಿಕರು, ಪೌರಕಾರ್ಮಿಕರು ಸೇರಿದಂತೆ ಹಸಿದ ಜನರಿಗೆ ಆಹಾರ ನೀಡುವ ಒಳ್ಳೆಯ ಕೆಲಸ ಮಾಡ್ತಿದ್ದಾರೆ.
ಚಾಮರಾಜಪೇಟೆಯ ಕನ್ನಿಕಾಪರಮೇಶ್ವರಿ ದೇವಾಲಯ ಬಳಿ ವಾಸವಾಗಿರುವ ಗೀತಾ ಪ್ರಕಾಶ್ ಭರ್ಕಿ ಹಾಗೂ ಚಂದ್ರ ಪ್ರಕಾಶ್ ದಂಪತಿಯು ಸಹಾಯ ಹಸ್ತದ ಹಿಂದಿರುವ ರೂವಾರಿಗಳು. ಯುಎಇ ದೇಶದ ಅಬುದಾಬಿಯ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುವ ಗೀತಾ ಪ್ರಕಾಶ್ ಹಾಗೂ ಅದೇ ದೇಶದಲ್ಲೇ ಕಂಪನಿಯೊಂದರ ಪ್ರಾಜೆಕ್ಟ್ ಮ್ಯಾನೇಜರ್ ಆಗಿರುವ ಚಂದ್ರ ಪ್ರಕಾಶ್ ಹಲವು ವರ್ಷಗಳಿಂದ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಮಾ. 17ರಂದು ಬೆಂಗಳೂರಿಗೆ ಬಂದಿದ್ದರು. ಮುಂಜಾಗ್ರತ ಕ್ರಮವಾಗಿ ಕೊರೊನಾ ಟೆಸ್ಟ್ ಮಾಡಿಸಿ 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿ ಇದ್ದರು.
ಲಾಕ್ಡೌನ್ನಿಂದಾಗಿ ಹಸಿದ ಜನರನ್ನು ನೋಡಿ ಮನನೊಂದ ದಂಪತಿ ಸಂಘ- ಸಂಸ್ಥೆಗಳ ಮೂಲಕ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡಿದರು. ತಾವೇ ಯಾಕೆ ಜನರ ಬಳಿ ಹೋಗಿ ಸಹಾಯ ಮಾಡಬಾರದು ಎಂದು ಚಿಂತಿಸಿದ ಪರಿಣಾಮವಾಗಿ ಹುಟ್ಟಿದ್ದೇ ವಾಟ್ಸ್ಆ್ಯಪ್ ಗ್ರೂಪ್. ಈ ಗ್ರೂಪ್ ರಚಿಸಿಕೊಂಡು ಸಂಬಂಧಿಕರು ಹಾಗೂ ಸ್ನೇಹಿತರನ್ನು ಸೇರಿಸಿಕೊಂಡು ತಾವು ಮಾಡುತ್ತಿರುವ ಸಾರ್ಥಕ ಕೆಲಸ ಬಗ್ಗೆ ವಿವರ ನೀಡಿದ್ದಾರೆ. ಒಳ್ಳೆ ಕೆಲಸಕ್ಕೆ ಅಭಿನಂದಿಸಿ ಸಾಕಷ್ಟು ಮಂದಿ ದೇಣಿಗೆ ನೀಡಲು ಆರಂಭಿಸಿದರು.
ಇದುವರೆಗೂ 180 ಸದಸ್ಯರಿಂದ 15 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದಾರೆ. ವಿದೇಶಗಳಿಂದ ಹಣ ಸಂಗ್ರಹಿಸಿ ನಗರದ ವಿವಿಧ ಮೂಲೆಯಲ್ಲಿರುವ ಬಡವರು, ನಿರ್ಗತಿಕರನ್ನು ಗುರುತಿಸಿ 3,500 ಜನರಿಗೆ ರೇಷನ್ ಕಿಟ್ ವಿತರಿಸಿದ್ದಾರೆ. ಡಯಾಲಿಸಿಸ್ ರೋಗಿಗಳಿಗೂ ಉಚಿತವಾಗಿ ಚಿಕಿತ್ಸೆ, ಔಷಧ ನೀಡುವ ಕೆಲಸ ಮಾಡಿದ್ದಾರೆ.