ಬೆಂಗಳೂರು: ರಾಜಾಜಿನಗರದ ಕಳಪೆ ರಸ್ತೆಯಲ್ಲಿ ಸೋಮವಾರ, 55 ವರ್ಷದ ಕುಮಾರ್ ದ್ವಿಚಕ್ರ ವಾಹನದಿಂದ ಬಿದ್ದು, ಟ್ರ್ಯಾಕ್ಟರ್ ಅವರ ಮೇಲೆ ಹರಿದು ಮೃತಪಟ್ಟಿದ್ದರು. ಈ ಸ್ಥಳದಲ್ಲಿ ಇಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನಾಕಾರರು ಸ್ಥಳೀಯ ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥ ನಾರಾಯಣ್ ವಿರುದ್ಧ ಕಿಡಿಕಾರಿದರು. ಭ್ರಷ್ಟಾಚಾರದಿಂದಾಗಿ ಕ್ಷೇತ್ರದಲ್ಲಾಗುವ ಎಲ್ಲ ಕೆಲಸಗಳು ಕಳಪೆಯಾಗಿವೆ. ಹೀಗಾಗಿ ರಸ್ತೆಗಳು ಹದಗೆಟ್ಟಿದ್ದು, ಪ್ರಯಾಣಿಕರು ಜೀವ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಎಎಪಿ ಬೆಂಗಳೂರು ವಕ್ತಾರರಾದ ಉಷಾ ಮೋಹನ್, ಬೆಂಗಳೂರಿನಲ್ಲಿ ರಸ್ತೆಗುಂಡಿಯಿಂದಾಗಿ ಅಪಘಾತವಾಗುವುದು ಸಾಮಾನ್ಯವಾಗಿಬಿಟ್ಟಿದೆ. ತಿಂಗಳಿಗೆ ಕನಿಷ್ಠ ಮೂರ್ನಾಲ್ಕು ಮಂದಿಯಾದರೂ ಜೀವ ಕಳೆದುಕೊಳ್ಳುತ್ತಿದ್ದಾರೆ. ಅಪಘಾತ ನಡೆದು ಕುಮಾರ್ ಜೀವ ಕಳೆದುಕೊಂಡ ಸ್ಥಳಕ್ಕೆ ಮುಖ್ಯಮಂತ್ರಿ ಆಗಮಿಸಬೇಕು. ಮೃತರ ಕುಟುಂಬಕ್ಕೆ ಶೀಘ್ರ ಪರಿಹಾರ ವಿತರಿಸಬೇಕು. ರಸ್ತೆ ಗುಂಡಿಗೆ ಕಾರಣರಾದ ಅಧಿಕಾರಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಎಎಪಿ ಮುಖಂಡರಾದ ಸುಮನ್ ಪ್ರಶಾಂತ್ ಮಾತನಾಡಿ, ಜೀರೋ ಟ್ರಾಫಿಕ್‌ನಲ್ಲಿ ತಿರುಗಾಡುವ ಮುಖ್ಯಮಂತ್ರಿಯವರಿಗೆ ಹಾಗೂ ಸದಾ ಕಾರಿನಲ್ಲೇ ತಿರುಗಾಡುವ ಸಚಿವರುಗಳು ಹಾಗೂ ಶಾಸಕರುಗಳಿಗೆ ಬೈಕ್ ಸವಾರರ ಕಷ್ಟ ಅರ್ಥವಾಗುತ್ತಿಲ್ಲ. ಕೇಳಿದಷ್ಟು ಕಮಿಷನ್ ಕೊಡಲು ಗುತ್ತಿಗೆದಾರರು ಒಪ್ಪದ ಕಾರಣಕ್ಕೆ ರಸ್ತೆ ಕಾಮಗಾರಿಗೆ ಹಣ ಬಿಡುಗಡೆ ಮಾಡಲೂ ಸರ್ಕಾರ ಮೀನಮೇಷ ಎಣಿಸುತ್ತಿದೆ. ಸಚಿವರು ಹಾಗೂ ಶಾಸಕರ ಹಣದ ದಾಹದಿಂದ ಅಮೂಲ್ಯ ವ್ಯಕ್ತಿಗಳನ್ನು ದೇಶ ಕಳೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಎಪಿ ಮುಖಂಡರಾದ ಉಷಾ ಮೋಹನ್, ಸುಮನ್ ಪ್ರಶಾಂತ್, ಪುಟ್ಟಣ್ಣ ಗೌಡ, ವಿಶ್ವನಾಥ್, ಮಹೇಶ್ ಬಾಬು ಮತ್ತಿತರ ನಾಯಕರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಈ ಬಾರಿಯೂ ಇಲ್ಲ ಸೈಕಲ್ ಭಾಗ್ಯ