ಬೆಂಗಳೂರು: ''ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ಒದ್ದಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಅದಕ್ಕಾಗಿಯೇ ಈಗ ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದ್ದಾರೆ'' ಎಂದು ಮಾಜಿ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಆರೋಪಿಸಿದರು.
ಹಾಲಿನ ದರ ಪರಿಷ್ಕರಣೆ ಕುರಿತು ಸಹಕಾರ ಸಚಿವ ಕೆ. ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್, ನೂತನ ಕೆ.ಎಂ.ಎಫ್ ಅಧ್ಯಕ್ಷ ಭೀಮಾ ನಾಯಕ್ ಒಂದು ಬಾರಿ ಕುಳಿತು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿ. ಎಲ್ಲರೂ ಮನಸ್ಸಿಗೆ ತಿಳಿದಂತೆ ಹೇಳುವುದು ಸೂಕ್ತವಲ್ಲ, ಇಲಾಖೆಯ ಬಗ್ಗೆ ಅಧ್ಯಯನ ಮಾಡಲಿ. ಈ ತರಹದ ತರಾತುರಿ ನಿರ್ಧಾರಗಳು ಸಾರ್ವಜನಿಕರ ಮೇಲೆ ಎಷ್ಟು ಪ್ರಭಾವ ಬೀರುತ್ತವೆ ಎಂದು ಅರಿತುಕೊಂಡು ನಿರ್ಧರಿಸಲಿ ಎಂದು ಪತ್ರಿಕಾ ಪ್ರಕಟಣೆ ಮೂಲಕ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಈಗಾಗಲೇ ರಾಜ್ಯದ ಉದ್ಯಮಿಗಳು ಕರೆಂಟ್ ಬಿಲ್ ಏರಿಕೆಯಿಂದಾಗಿ ತತ್ತರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿ ಲೀಟರ್ಗೆ 5 ರೂಪಾಯಿ ಹೆಚ್ಚಿಸುವ ಪ್ರಸ್ತಾವನೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಲಿದೆ. ನೇರವಾಗಿ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ದರ ಏರಿಕೆ ಮಾಡುವ ಮೊದಲು ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಆಲೋಚಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಗ್ರಾಹಕರಿಗೆ ಆಗುವ ಈ ಹೊರೆ ರೈತರಿಗೆ ಲಾಭವೇ?: ''ಕೇವಲ ಗ್ರಾಹಕರಿಗೆ ಹಾಲಿನ ದರ ಏರಿಸಿ ಬಿಸಿ ಮುಟ್ಟಿಸುವುದಲ್ಲ. ರೈತರಿಗೆ ಹಾಲಿನ ಪ್ರೋತ್ಸಾಹಧನವನ್ನು ಹೆಚ್ಚಿಸಿ. ಪ್ರತಿ ಲೀಟರ್ಗೆ ರೂ.5 ಹೆಚ್ಚಿಸಬೇಕೆಂಬ ಪ್ರಸ್ತಾವನೆಯಲ್ಲಿ ರೈತರಿಗೆ ಎಷ್ಟು ಪಾಲು ನೀಡಲಾಗುತ್ತದೆ. ರೈತರ ಪ್ರೋತ್ಸಾಹ ಧನವನ್ನು ಹೆಚ್ಚಿಸಲು ಏನು ಕ್ರಮ ಕೈಗೊಂಡಿದ್ದೀರಿ'' ಎಂದು ಮಾಜಿ ಸಚಿವರು ಪ್ರಶ್ನಿಸಿದ್ದಾರೆ.
''ಇತ್ತೀಚೆಗೆ ರೈತರಿಂದ ಖರೀದಿಸುವ ಹಾಲಿಗೆ ನಿಗದಿಪಡಿಸಿರುವ ದರದಲ್ಲಿ ಬಮೂಲ್ ಕಡಿತ ಮಾಡಿತ್ತು. ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಪ್ರತಿ ಲೀಟರ್ ಹಾಲಿಗೆ 1.50 ರೂ. ಕಡಿತ ಮಾಡಿತ್ತು. ಹಾಲು ಒಕ್ಕೂಟದ ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಸರ್ಕಾರದ ನಡೆ ಗಮನಿಸಿದರೆ ಜನವಿರೋಧಿಯ ಎಲ್ಲ ನೀತಿಗಳನ್ನು ಅನುಸರಿಸುತ್ತಿದೆ. ಇದು ಒಳ್ಳೆಯದಲ್ಲ ಖಂಡನಾರ್ಹವಾದದ್ದು'' ಎಂದು ಪ್ರಭು ಚವ್ಹಾಣ ಹೇಳಿದ್ದಾರೆ.
ವಿದ್ಯುತ್ ದರ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ- ಸಚಿವ ಎಂ. ಬಿ. ಪಾಟೀಲ: ''ವಿದ್ಯುತ್ ದರ ಕಾಂಗ್ರೆಸ್ ಸರ್ಕಾರ ಹೆಚ್ಚಿಸಿಲ್ಲ. ಸ್ವಾಯತ್ತತೆ ಹೊಂದಿರುವ ಕೆಇಆರ್ಸಿ ಸಂಸ್ಥೆಯು ವಿದ್ಯುತ್ ದರ ಹೆಚ್ಚಳ ಮಾಡಿದೆ'' ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದರು. ವಿದ್ಯುತ್ ದರ ಹೆಚ್ಚಳ ವಿಚಾರದ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ''ವಿದ್ಯುತ್ ಬೆಲೆಯನ್ನು ನಮ್ಮ ಸರ್ಕಾರ ಬರುವ ಮೊದಲೇ ಏರಿಕೆ ಮಾಡಲಾಗಿದೆ. ಇದರಿಂದ ವಿದ್ಯುತ್ ದರ ಹೆಚ್ಚಳ ಮಾಡಿರುವುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಈ ಕುರಿತು ನಾನು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸುತ್ತೇನೆ. ವಿದ್ಯುತ್ ಬೆಲೆಯನ್ನು ಕೆಇಆರ್ಸಿಯಿಂದ ಕಾಲಕಾಲಕ್ಕೆ ಏರಿಕೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರೊಂದಿಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲಾಗುವುದು" ಎಂದು ತಿಳಿಸಿದರು.