ಬೆಂಗಳೂರು : ಕಳೆದ ಎಂಟು ವರ್ಷಗಳ ಹಿಂದೆ ದರೋಡೆಗೆ ಸಂಚು ರೂಪಿಸಿದ ಆರೋಪ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿಶೀಟರ್ ನ್ಯಾಯಾಲಯದ ಮುಂದೆ ಶರಣಾಗತಿಯಾಗಿದ್ದಾನೆ. ರಾಘವೇಂದ್ರ ಅಲಿಯಾಸ್ ಬೇಕರಿ ರಘು ನಗರದ 31ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರಾಗಿ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
2013ರಲ್ಲಿ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ. ಈ ಸಂಬಂಧ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿನ ಮೇರೆಗೆ ಹೊರ ಬಂದಿದ್ದ. ವಿಚಾರಣೆ ಹಾಜರಾಗುವಂತೆ 31ನೇ ಎಸಿಎಂಎಂ ಸೂಚಿಸಿದ್ದರೂ ಗೈರು ಹಾಜರಾಗಿದ್ದ. ಹೀಗಾಗಿ, ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದರೂ ಹಾಜರಾಗಿರಲಿಲ್ಲ. ಇಂದು ದಿಢೀರನೇ ಕೋರ್ಟ್ ಮುಂದೆ ಹಾಜರಾಗಿ ಜೈಲು ಪಾಲಾಗಿದ್ದಾನೆ.
ಕುಖ್ಯಾತ ರೌಡಿಶೀಟರ್ ಸೈಕಲ್ ರವಿ ಸಹಚರನಾಗಿ ಬೇಕರಿ ರಘು ಗುರುತಿಸಿಕೊಂಡಿದ್ದ. ಸಿ ಕೆ ಅಚ್ಚುಕಟ್ಟು, ಹನುಮಂತನಗರ, ಬನಶಂಕರಿ, ಕೆಂಗೇರಿ ಸೇರಿ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ 20ಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ.
ಕಳೆದ ವರ್ಷ ರೌಡಿಶೀಟರ್ ಬಾಂಬೆ ರವಿ ಸೂಚನೆ ಮೇರೆಗೆ ಸೈಕಲ್ ರವಿ ಹಾಗೂ ಬೇಕರಿ ರಘು ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಬಾಂಬೆ ರವಿ ಸಹಚರರನ್ನು ಜಯನಗರ ಪೊಲೀಸರು ಬಂಧಿಸಿದ್ದರು.
ಎರಡು ವರ್ಷದ ಹಿಂದೆಯೇ ಕೋರ್ಟ್ಗೆ ಶರಣಾಗಿದ್ದ : ಕಳೆದ ಎರಡು ವರ್ಷಗಳ ಹಿಂದೆ ರೌಡಿ ಸೈಕಲ್ ರವಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸೈಕಲ್ ರವಿಗೆ ಎರಡು ಪಿಸ್ತೂಲ್ ಪೂರೈಕೆ ಆರೋಪ ಬೇಕರಿ ರಘು ಮೇಲಿತ್ತು. ಈ ಸಂಬಂಧ ಸಿಸಿಬಿ ಪೊಲೀಸರ ಬಂಧನ ಭೀತಿಯಿಂದ ಈ ಹಿಂದೆಯೂ ನ್ಯಾಯಾಲಯದ ಮುಂದೆ ಶರಣಾಗಿದ್ದ.