ಬೆಂಗಳೂರು : ನಗರದಿಂದ ಗಡಿಪಾರಾಗಿದ್ದರೂ ಇತ್ತೀಚೆಗೆ ಸೈಲೆಂಟ್ ಆಗಿ ಮತ್ತೆ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟು ದುಷ್ಕೃತ್ಯ ಮುಂದುವರೆಸಿದ್ದ ನಟೋರಿಯಸ್ ರೌಡಿಶೀಟರ್ವೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರೌಡಿಶೀಟರ್ ಉಪಟಳಕ್ಕೆ ಬ್ರೇಕ್ ಹಾಕಿರುವ ಪೊಲೀಸರು ಶನಿವಾರ ಬೆಳಗ್ಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಮೊಹಮ್ಮದ್ ಅವೇಜ್ ಎಂಬಾತನೆ ಗುಂಡೇಟು ತಿಂದಿರುವ ಆರೋಪಿಯಾಗಿದ್ದಾನೆ. ನಗರದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿರುವ ಈತನನ್ನು ಕಳೆದ ವರ್ಷ ನಗರದಿಂದ ಗಡಿಪಾರು ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಸೈಲೆಂಟ್ ಆಗಿ ಸಿಲಿಕಾನ್ ಸಿಟಿ ಒಳಗೆ ಬಂದಿದ್ದು, ಗುರುವಾರ ಪೂರ್ವ ವಿಭಾಗದ ಡಿ.ಜೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನೇಪಾಳ ಮೂಲದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದ. ಆರೋಪಿ ಮೊಹಮ್ಮದ್ ಅವೇಜ್ನನ್ನು ಬಂಧಿಸಿದ್ದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ವೇಳೆ ಎಸ್ಕೇಪ್ ಆಗಿ ನಾಪತ್ತೆಯಾಗಿದ್ದ.
ಇಂದು ಬೆಳಗ್ಗೆ ನಗರದ ವೀರಣ್ಣಪಾಳ್ಯ ಬಳಿ ಆರೋಪಿ ತಲೆಮರೆಸಿಕೊಂಡ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಎಲ್ಲೆಡೆ ಶೋಧ ನಡೆಸಿದ್ದರು. ಈ ವೇಳೆ, ಆರೋಪಿ ನಿರ್ಜನ ಪ್ರದೇಶದಲ್ಲಿ ಅಡಗಿದ್ದ. ಪೊಲೀಸ್ ಸಿಬ್ಬಂದಿ ಬಂಧಿಸಲು ಹೋದಾಗ ಅವರ ಮೇಲೆಯೇ ಮರು ದಾಳಿ ನಡೆಸಿ ಕಾನ್ಸ್‌ಟೇಬಲ್ ಅರುಣ್ ಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಈ ವೇಳೆ, ಡಿಜೆಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ.
ಪಂಕ್ಚರ್ ಹಾಕುತ್ತಿದ್ದ ಆರೋಪಿ : ಅವೇಜ್ ಡಿಜೆಹಳ್ಳಿಯಲ್ಲಿ ಏಳು ವರ್ಷಗಳ ಹಿಂದೆ ಪಂಕ್ಚರ್ ಹಾಕುತ್ತಿದ್ದ. ಈಗ ಈತನ ಮೇಲೆ ನಗರದ 8 ವಿಭಾಗಗಳ 18 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 27 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಡಿಪಾರು, 10 ಬಾರಿ ಜೈಲೂಟ : ಕಳೆದ ವರ್ಷ ಬೆಂಗಳೂರು ನಗರದಿಂದ ಮಹಮ್ಮದ್ ಅವೇಜ್ನನ್ನು ಗಡಿಪಾರು ಮಾಡಲಾಗಿತ್ತು. ಇದಕ್ಕೂ ಮುನ್ನ 10 ಬಾರಿ ಜೈಲಿಗೆ ಹೋಗಿರುವ ಈತ ಜಾಮೀನಿನ ಮೇಲೆ ಹೊರ ಬಂದಿದ್ದ. ಈಗ ಅತ್ಯಾಚಾರಕ್ಕೆ ಯತ್ನಿಸಿ ಮತ್ತೊಮ್ಮೆ ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆ ಪಾಲಾಗಿದ್ದಾನೆ. ಅಲ್ಲದೇ ಗಡಿಪಾರು ಆದೇಶ ಉಲ್ಲಂಘನೆ ಮಾಡಿ ನಗರಕ್ಕೆ ಬಂದಿರುವ ಬಗ್ಗೆ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದ್ದೇವೆ. ಸದ್ಯ ಅತ್ಯಾಚಾರ ಯತ್ನ ಸಂಬಂಧ ಡಿಜೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಗುಳೇದ್ ಹೇಳಿದ್ದಾರೆ.
ಇನ್ನೂ ಓದಿ: ಮದುವೆಯಾಗುವುದಾಗಿ ಕೈಕೊಟ್ಟ ಪ್ರಿಯಕರನ ಮನೆಯಲ್ಲೇ ಪ್ರೇಯಸಿ ಆತ್ಮಹತ್ಯೆಗೆ ಯತ್ನ