ಬೆಂಗಳೂರು: ಕೈ ಶಾಸಕರಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ನೀಡಲು ನಿರ್ಧರಿಸಿದೆ. ಜಮೀರ್ ಅಹಮದ್ ಖಾನ್, ಪ್ರಕಾಶ್ ಹುಕ್ಕೇರಿ ಮತ್ತು ಸೌಮ್ಯ ರೆಡ್ಡಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ.
ಈ ಸಂಬಂಧ ನಿನ್ನೆ ಮಾಜಿ ಕೇಂದ್ರ ಸಚಿವ ರೆಹಮಾನ್ ಖಾನ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಮುಂದಿನ ಸಿಎಂ ಅಭ್ಯರ್ಥಿ ಸಿದ್ದರಾಮಯ್ಯ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ಕೊಟ್ಟಿದ್ದರು. ಇತ್ತ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮುಂದಿನ ಸಿಎಂ ಅಭ್ಯರ್ಥಿ ಡಿ.ಕೆ.ಶಿವಕುಮಾರ್ ಎಂದು ಹೇಳಿದ್ದರು. ಅದೇ ರೀತಿ ಕೈ ನಾಯಕ ಪ್ರಕಾಶ್ ಹುಕ್ಕೇರಿ, ದಿವಂಗತ ಸುರೇಶ್ ಅಂಗಡಿ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ, ಕಾಂಗ್ರೆಸ್ನಿಂದ ಯಾರೇ ಅಭ್ಯರ್ಥಿ ಆದರೂ ಬಿಜೆಪಿಗೆ ಸಪೋರ್ಟ್ ಮಾಡ್ತೀನಿ ಅಂತ ಹೇಳಿಕೆ ಕೊಟ್ಟಿದ್ದರು.
ಈ ಹೇಳಿಕೆಗಳು ಪಕ್ಷ ಸಂಘಟನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಮಜಾಯಿಷಿ ಕೊಡುವಂತೆ ನೋಟಿಸ್ ನೀಡಲು ಕೆಪಿಸಿಸಿ ಶಿಸ್ತು ಸಮಿತಿ ನಿರ್ಧರಿಸಿದೆ.